ಬೆಂಗಳೂರು:ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ “ಜನೋತ್ಸವ’ ಕಾರ್ಯಕ್ರಮ ಆ.28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪನವರ 2 ವರ್ಷದ ಆಡಳಿತ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 1 ವರ್ಷದ ಆಡಳಿತ ಸೇರಿ ಬಿಜೆಪಿಯ 3 ವರ್ಷದ ಆಡಳಿತದ ಸಾಧನೆಗಳನ್ನು ಸಂಭ್ರಮಿಸಲು ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿರ್ಣಾಯಕ. ಅವರಿಂದ ಆರಿಸಿ ಬಂದ ಸರ್ಕಾರವೊಂದು ಅವರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರೆ ಅದು ಜನ ಹಬ್ಬ ಎನಿಸಿಕೊಳ್ಳುತ್ತದೆ. ಆ ಅರ್ಥದಲ್ಲಿ ಕಾರ್ಯಕ್ರಮವನ್ನು ಜನೋತ್ಸವ ಎಂದು ಹೆಸರಿಸಲಾಗಿದೆ ಎಂದು ಸಚಿವ ಸುಧಾಕರ್ ವಿವರಿಸಿದರು.
ದೊಡ್ಡಬಳ್ಳಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹಾಗೂ ತುಮಕೂರು ಜಿಲ್ಲೆಯ 4 ತಾಲೂಕುಗಳ ಜನ ಸೇರಲಿದ್ದಾರೆ.
ಇದೇ ರೀತಿಯ ಕಾರ್ಯಕ್ರಮಗಳನ್ನು ರಾಜ್ಯದ ಐದಾರು ಕಡೆ ಮಾಡಿ, ಕೊನೆಯಲ್ಲಿ ರಾಜ್ಯ ಮಟ್ಟದ ಬೃಹತ್ ಕಾರ್ಯಕ್ರಮ ನಡೆಸುವ ಬಗ್ಗೆ ಪಕ್ಷ ಆಲೋಚನೆ ಹೊಂದಿದೆ ಎಂದು ಸುಧಾಕರ್ ತಿಳಿಸಿದರು.