Advertisement

ಕಳಪೆ ಕಾಮಗಾರಿಯ ಆಡಿಟೋರಿಯಂ: ವಿದ್ಯಾರ್ಥಿಗಳಿಗೆ ಪ್ರಾಣಭಯ

02:56 AM Mar 28, 2019 | sudhir |

ಕುಂಬಳೆ: ಪೈವಳಿಕೆ ನಗರದ ಸರಕಾರಿ ಪ್ರೌಢ ವಿದ್ಯಾಲಯಕ್ಕೆ ಅಗಲಿದ ಶಾಸಕ ಪಿ.ಬಿ. ಅಬ್ದುಲ್‌ ರಜಾಕ್‌ ಅವರು ಶಾಲೆಯ ಸಭಾಂಗಣಕ್ಕೆ ಆಡಿಟೋರಿಯಂ ಒಂದನ್ನು ನಿರ್ಮಿಸಲು 10 ಲಕ್ಷ ರೂ. ನಿಧಿ ಮಂಜೂರುಗೊಳಿಸಿದ್ದಾರೆ.

Advertisement

ಸುಮಾರು 20 ಮೀಟರ್‌ ಉದ್ದಗಲದ 15 ಮೀಟರ್‌ಎತ್ತರದಲ್ಲಿ ಚಪ್ಪರದ ಕಾಮಗಾರಿಯನ್ನು ಚೆರ್ಕಳದ ಗುತ್ತಿಗೆದಾರರೋರ್ವರು ಟೆಂಡರ್‌ ಒಪ್ಪಿ ಅರೆಬರೆಯಾಗಿ ನಿರ್ವಹಿಸಿದ್ದಾರೆ. ಆದರೆ ಈ ಕಳಪೆ ಕಾಮಗಾರಿಯಿಂದ ಶಾಲೆಯ ಮಕ್ಕಳು ಭಯಭೀತರಾಗಿದ್ದಾರೆ. ವಿಶಾಲ ಎತ್ತರದ ಚಪ್ಪರವನ್ನು ಕಬ್ಬಿಣದ ಸಲಕರಣೆಗಳ ಮೂಲಕ ನಿರ್ಮಿಸಲಾಗಿದೆ. ಮಾಡಿಗೆ ಶೀಟ್‌ ಹೊದಿಸಲಾಗಿದೆ.

ಕಳಪೆ ಕಾಮಗಾರಿಯಿಂದ ಅಭದ್ರತೆ
ಕಬ್ಬಿಣದ ಕಂಬಗಳನ್ನು ಸ್ಥಾಪಿಸಲು ನೆಲದಿಂದ ಕಾಂಕ್ರೀಟ್‌ ಪಿಲ್ಲರ್‌ ನಿರ್ಮಿಸಿ ಇದರಿಂದ ಕಬ್ಬಿಣದ ಬೋಲ್ಟ್ ಮೂಲಕ ಕಬ್ಬಿಣದ ಕಂಬವನ್ನು ಜೋಡಿಸಲಾಗಿದೆ. ಆದರೆ ಎಲ್ಲ ಪಿಲ್ಲರ್‌ಗಳಲ್ಲೂ ಬೋಲ್ಟ್ ಅಳವಡಿಸಿಲ್ಲ. ಇದರಿಂದ ಚಪ್ಪರದ ಭದ್ರತೆಗೆ ಅಪಾಯವಿದೆ. ಮಾತ್ರವಲ್ಲದೆ ಮಾಡಿನ ಶೀಟ್‌ ತೆಳುವಾಗಿದ್ದು ಇದು ಹೆಚ್ಚು ಕಾಲ ಬಾಳದು ಎಂಬ ಆರೋಪ ಶಾಲಾ ಶಿಕ್ಷಕ-ರಕ್ಷಕರದು. ಮಾಡಿಗೆ ಆಡ್ಡಲಾಗಿ ಜೋಡಿಸಿದ ಕಬ್ಬಿಣದ ಸಲಾಕೆಗಳು ಕಮ್ಮಿಯಾಗಿದ್ದು ರಭಸದ ಗಾಳಿಯನ್ನು ತಡೆಯಲು ಇದು ಸಾಲದು. ಕಬ್ಬಿಣದ ಕಂಬ ಜೋಡಣೆಗೆ ಹೊರಭಾಗಕ್ಕೆ ಮಾತ್ರ ವೆಲ್ಡಿಂಗ್‌ ಮಾಡಿದ್ದು ಕಂಬದ ಒಳಭಾಗದ ಕಬ್ಬಿಣದ ತುಂಡಿನ ಜೋಡಣೆಗೆ ವೆಲ್ಡಿಂಗ್‌ ಮಾಡದೆ ಕೆಲವು ಕಡೆಗಳಲ್ಲಿ ಉಳಿಸಲಾಗಿದೆ. ಇದರಿಂದ ಇಡೀ ಚಪ್ಪರಕ್ಕೆ ಅಪಾಯವಿದೆ. ಕೆಲವು ವರ್ಷಗಳ ಬಳಿಕ ಈ ಕಂಭಗಳಿಗೆ ತುಕ್ಕು ಹಿಡಿದಲ್ಲಿ ಇದರ ಅವಸ್ಥೆ ಹೇಳತೀರದು. ಸಂಭಾಂಗಣಕ್ಕೆ ಕೇವಲ ಚಪ್ಪರ ಮಾತ್ರ ನಿರ್ಮಿಸಿರುವುದಲ್ಲದೆ ಚಪ್ಪರದಡಿಯ ನೆಲಕ್ಕೆ ಕಾಂಕ್ರೀಟ್‌ ಹಾಕಿಲ್ಲ. ಸುತ್ತುಗೋಡೆ ಇಲ್ಲ. ಎಸ್ಟಿಮೇಟಿನಲ್ಲಿ ಇದು ಯಾವುದೂ ಇಲ್ಲವಂತೆ.

ಶಾಲಾ ಮಕ್ಕಳ ಅನುಕೂಲಕ್ಕಾಗಿ ಆಡಿಟೋರಿಯಂ ನಿರ್ಮಿಸಿದ್ದರೂ ನಮಗೆ ಯಾವುದೇ ಮಾಹಿತಿ ಇಲ್ಲ. ಕಾಮಗಾರಿಯ ಕುರಿತು ನಮ್ಮಲ್ಲಿ ಯಾವುದೇ ಸಲಹೆ ಕೇಳಿಲ್ಲ. ಆದುದರಿಂದ ನಾವು ಅಸಹಾಯಕರು. ಕಳಪೆ ಕಾಮಗಾರಿಯ ಕುರಿತು ಗುತ್ತಿಗೆದಾರರಲ್ಲಿ ಮತ್ತು ಸಂಬಂಧಪಟ್ಟ ಅಧಿಕಾರಿಯವರ ಗಮನ ಸೆಳೆದರೂ ಯಾವುದೇ ಪರಿಣಾಮ ಬೀರಿಲ್ಲ. ಕೆಲವು ವರ್ಷಗಳ ಬಳಿಕ ಇದು ಅಪಾಯವನ್ನು ಆಹ್ವಾನಿಸಲಿದೆ ಎಂಬುದು ವಿದ್ಯಾಲಯದ ಹೆಚ್ಚಿನವರ ಅಭಿಪ್ರಾಯವಾಗಿದೆ.

ತುರ್ತು ಗಮನ ಅಗತ್ಯ
ಸಂಬಂಧ‌ಪಟ್ಟ ಅಧಿಕಾರಿಗಳು ಇದರತ್ತ ತುರ್ತು ಗಮನ ಹರಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿಗಳಲ್ಲಿ ಗಾಳಿ ಮಳೆಗೆ ಇದ ರಿಂದ ಅನಾಹುತವಾಗುವ ಸಾಧ್ಯತೆ ಇದೆ.
-ಪಿ. ಅಬ್ದುಲ್ಲ ಹಾಜಿ ಪೈವಳಿಕೆ ಮಾಜಿ ಸದಸ್ಯರು, ಪೈವಳಿಕೆ ಗ್ರಾ.ಪಂ.

Advertisement

ದುರದೃಷ್ಟವಶಾತ್‌ ಅವರಿಲ್ಲ
ದುರದೃಷ್ಟವಶಾತ್‌ ಶಾಸಕರು ನಮ್ಮನ್ನಗಲಿದ ಕಾರಣ ಕಳಪೆ ಕಾಮಗಾರಿ ಕುರಿತು ಗಮನ ಸೆಳೆಯಲು ಅವರಿಲ್ಲ.ಗುತ್ತಿಗೆದಾರರರಲ್ಲಿ ಮತ್ತು ಸಂಬಂಧಪ್ಪಟ್ಟ ಕಾರ್ಯನಿರ್ವಹಣ ಅಭಿಯಂತರಲ್ಲಿ ಮೌಖೀಕವಾಗಿ ದೂರು ನೀಡಲಾಗಿದೆ.ಆದರೆ ಇವರೆಲ್ಲರೂ ಸ್ಥಳಕ್ಕೆ ಆಗಮಿಸಿ ಗುತ್ತಿಗೆದಾರರ ಪರವಾಗಿ ವಾದಿಸಿರುವ ಕಾರಣ ಮುಂದೆ ಲಿಖೀತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು.
-ಇಬ್ರಾಹಿಂ ಪಾವಲುಕೋಡಿ ಅಧ್ಯಕ್ಷರು, ಶಾಲಾ ರಕ್ಷಕ-ಶಿಕ್ಷಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next