ಬಳ್ಳಾರಿ: ಏಪ್ರಿಲ್‌ನಲ್ಲಿ ಬ್ಯಾಂಕ್‌ಗಳ ಲೆಕ್ಕ ಪರಿಶೋಧನೆ ನಡೆಯಲಿರುವ ಹಿನ್ನೆಲೆಯಲ್ಲಿ ಲೆಕ್ಕ ಪರಿಶೋಧಕರಿಗೆ ಹೆಚ್ಚಿನ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಐಸಿಎಐ ಭವನದಲ್ಲಿ ನಡೆಯಿತು. ಸ್ಟೇಟ್ ಬ್ಯಾಂಕ್ ಇಂಡಿಯಾದ ಡಿಜಿಎಂ ಪ್ರದೀಪ್ ನಾಯರ್ ಕಾರ್ಯಾಗಾರ ಉದ್ಘಾಟಿಸಿ, ಬ್ಯಾಂಕ್ ಶಾಖೆಗಳ ಲೆಕ್ಕಪರಿಶೋಧನೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರ, ಮಹತ್ವದ ಕುರಿತು ಮಾಹಿತಿ ನೀಡಿದರು.
ಒತ್ತಡದ ನಡುವೆಯೂ ಬ್ಯಾಂಕ್‌ಗಳ ಶಾಖಾ ವ್ಯವಸ್ಥಾಪಕರು ಲೆಕ್ಕ ಪರಿಶೋಧನೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜನಸಾಮಾನ್ಯರಲ್ಲಿ ಹಣಕಾಸು ವ್ಯವಹಾರಗಳ ಬಗ್ಗೆ ಅರಿವು ಮೂಡಿಸುವ ಮತ್ತು ಎಂಎಸ್‌ಎಂಇ (ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ) ರಕ್ಷಣೆ ಮತ್ತು ವಿಸ್ತರಣೆಗೆ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಜೊತೆಗೆ ಜಂಟಿ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ನೆರವೇರಿಸುವುದಾಗಿ ತಿಳಿಸಿದರು.
ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಉಪಾಧ್ಯಕ್ಷ ಸಿ.ಎ. ಪನ್ನರಾಜ್ ಮಾತನಾಡಿ, ಪ್ರಾಂತೀಯ ಕಚೇರಿಯಲ್ಲಿ ಶಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ಕಾರ್ಯಯೋಜನೆಗಳನ್ನು ವಿವರಿಸಿದರು.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಕೇಂದ್ರ ಪರಿಷತ್ತಿನ ಚುನಾಯಿತ ಸದಸ್ಯ ಸಿಎ ದಯಾನಿವಾಸ ಶರ್ಮ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಐಸಿಎಐ ಸಂಸ್ಥೆ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಅನುಷ್ಠಾನಗೊಳಿಸಿದಲ್ಲಿ ಬಳ್ಳಾರಿಯಂತಹ ಪ್ರದೇಶದ ಚಾರ್ಟರ್ಡ್ ಅಕೌಂಟೆಂಟ್‌ಗಳು ಕೂಡ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಖೆಯ ಆಡಳಿತ ಮಂಡಳಿ ಸಿ.ಎ. ಪನ್ನರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆನಂದಕೃಷ್ಣ, ಆನಂದ್ ಪ್ರಕಾಶ್ ಜಂಗಿದ್, ಪಟ್ಟಾಭಿರಾಮನ್ ಮಾತನಾಡಿದರು. ಉಪಾಧ್ಯಕ್ಷ ಕೆ.ನಾಗನಗೌಡ, ಖಜಾಂಚಿ ಪುರುಷೋತ್ತಮರೆಡ್ಡಿ, ಶಾಖೆ ಸದಸ್ಯ ವಿಶ್ವನಾಥ ಆಚಾರಿ, ಕೋಮಲ್ ಜೈನ್ ಇತರರು ಇದ್ದರು. ಶಾಖೆ ಅಧ್ಯಕ್ಷ ವಿನೋದ್‌ಕುಮಾರ್ ಬಾಗ್ರೇಚ ಸ್ವಾಗತಿಸಿದರು. ಕಾರ್ಯದರ್ಶಿ ಗಜರಾಜ ಡಿ ನಿರೂಪಿಸಿ, ವಂದಿಸಿದರು.