ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ನಾಮಪತ್ರ ವಾಪಸು ಪಡೆಯಲು ತಲಾ 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಬಲಿಗ ಎಚ್.ಡಿ.ದರ್ಶನ್ ಮತ್ತು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಳ್ಳುವ ನೃಪತುಂಗ ಅವರ ನಡುವೆ ನಡೆದಿರುವ ಆಡಿಯೋ ವೈರಲ್ ಬಗ್ಗೆ ಕೂಡಲೇ ಸೂಕ್ತ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಒತ್ತಾಯಿಸಿದ್ದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವೈರಲ್ ಆದ ಆಡಿಯೋ ಎಡಿಟ್ ಮಾಡಿದಂಥ ಆಡಿಯೋವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಆಡಿಯೋದ ಸಂಪೂರ್ಣ ತನಿಖೆಯಾಗಬೇಕು. ಈ ಸಂಬಂಧ ಎಸ್‌ಪಿ ಅವರಿಗೆ ದೂರು ಸಲ್ಲಿಸುತ್ತೇವೆ ಎಂದು ನುಡಿದರು.
ತೇಜೋವಧೆಗೆ ಯತ್ನ: ದರ್ಶನ್ ನಡೆಸಿರುವ ಆಡಿಯೋ ಸಂಭಾಷಣೆಯು ವೈರಲ್ ಆಗಿದ್ದು, ನಾಮಪತ್ರ ವಾಪಸ್ ಪಡೆಯಲು ಪಕ್ಷದ ಹಿರಿಯ ನಾಯಕರು ಹಣ ಪಡೆದಿದ್ದಾರೆ ಎನ್ನುವ ವಿಚಾರ ಪಕ್ಷದ ಹಿರಿಯ ನಾಯಕರಿಗೆ ತೇಜೋವಧೆ ಮಾಡಿದಂತಾಗಿದೆ ಎಂದರು.
ಆಗ್ರಹ: ಆಡಿಯೋವನ್ನು ದುರುದ್ದೇಶದಿಂದ ಮಾಡಲಾಗಿದ್ದು ಅಲ್ಲಲ್ಲಿ ಕಟ್ ಮಾಡಿ ಅಗತ್ಯಕ್ಕೆ ತಕ್ಕಂತೆ ಬಳಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ ಸಂಪೂರ್ಣ ಆಡಿಯೋದ ತನಿಖೆಯಾಗಬೇಕು. ಇದರ ಹಿಂದೆ ಕಾಣದ ವ್ಯಕ್ತಿಗಳ ಕುತಂತ್ರವೂ ಇದ್ದು, ಸೂಕ್ತ ತನಿಖೆ ಮೂಲಕ ಇವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್. ಷಪಿ ಅಹಮದ್, ಕಾಂಗ್ರೆಸ್ ಮುಖಂಡರಾದ ಶಿವಮೂರ್ತಿ, ನರಸಿಯಪ್ಪ, ವಿಜಯಕುಮಾರ್, ಮಲ್ಲೇಶ್, ಮಾಜಿ ಮೇಯರ್ ಗೀತಾರುದ್ರೇಶ್ ಸೇರಿದಂತೆ ಇನ್ನಿತರರಿದ್ದರು.
ಪತ್ರಿಕಾಗೋಷ್ಠಿಯ ನಂತರ ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮುಖಂಡತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಸಾಮಾಜಿಕ ಜಾಲತಾಣದ ಮಾಜಿ ಸಂಚಾಲಕ ಹಾಗೂ ಡಿಸಿಎಂ ಬೆಂಬಲಿಗ ಎಚ್.ಡಿ. ದರ್ಶನ್ ಮತ್ತು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಳ್ಳುವ ನೃಪತುಂಗ ಅವರ ನಡುವೆ ನಡೆದಿರುವ ಆಡಿಯೋ ವೈರಲ್ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಹೆಚ್ಚುವರಿ ಎಸ್ಪಿ ಡಾ. ಶೋಭಾರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.