Advertisement
ಆಡಿಯೋ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸದೆ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಒತ್ತಾಯ ಮುಂದುವರಿಸಿ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು, ಭೋಜನಾ ವಿರಾಮದ ನಂತರ ಆಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಹಾಸನ ಶಾಸಕರ ಮನೆ ಮೇಲೆ ದಾಳಿ ಪ್ರಕರಣ ಮುಂದಿಟ್ಟು ಪ್ರತಿಭಟನೆ ಮಾಡಿದರು. “ಗೂಂಡಾ ಸರ್ಕಾರ’ ಎಂದು ಘೋಷಣೆ ಕೂಗಿದರು. ಗದ್ದಲ-ಕೋಲಾಹಲ ಉಂಟಾಗಿದ್ದರಿಂದ ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು.
Related Articles
Advertisement
ಎಸ್‌ಐಟಿ ತನಿಖೆ ನಡೆಸುವುದಾಗಿ ಸರ್ಕಾರ ಮೊದಲೇ ಸ್ಪಷ್ಟಪಡಿಸಿತ್ತು. ಆದರೂ ಸಭಾಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ಮಾತುಕತೆಗೆ ಆಗಮಿಸಿದ್ದೆವು. ಸ್ಪೀಕರ್ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಧಾನ ಮಾಡುವ ಪ್ರಯತ್ನ ನಡೆಸಿದರು. ಆದರೆ, ಕರ್ನಾಟಕದಲ್ಲಿ ಶಾಸಕರ ಕೆಟ್ಟ ಕುದುರೆ ವ್ಯಾಪಾರ ನಡೆಯುತ್ತಿದೆ. ಬಹು ಮತ ಇರುವ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜನರು ನಮ್ಮನ್ನು ಕೆಟ್ಟದಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಪೀಕರ್ ಮೇಲೆ ಆರೋಪ ಬರದಿದ್ದರೆ ಬಿಜೆಪಿಯವರ ವಾದ ಒಪ್ಪುತ್ತಿದ್ದೆವೇನೋ, ಆದರೆ, ಸ್ಪೀಕರ್ ಹೆಸರು ಪ್ರಸ್ತಾಪ ಆಗಿದೆ. ಹಣದ ಮಾತುಕತೆ ನಡೆದಿರುವುದರಿಂದ ಭ್ರಷ್ಟಾಚಾರ ವ್ಯಾಪ್ತಿಯಲ್ಲಿ ಬರುತ್ತದೆ. ಸದನ ಸಮಿತಿಯಿಂದ ಶಿಕ್ಷೆ ನೀಡಲು ಆಗುವುದಿಲ್ಲ. ಇದರ ಹಿಂದೆ ಎಷ್ಟೇ ದೊಡ್ಡವರ ಕೈವಾಡ ಇದ್ದರೂ, ಅವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು. ಎಸ್‌ಐಟಿ ತನಿಖೆ ನಡೆಸಿದ ನಂತರ ಸರ್ಕಾರ ಕ್ಕೇನೂ ವರದಿ ಕೊಡುವುದಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಹೀಗಾಗಿ, ಸರ್ಕಾರ ಮಧ್ಯಪ್ರವೇಶ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸರ್ಕಾರದ ಪರವಾಗಿ ಅವರೇ ಸ್ಪಷ್ಟನೆ ನೀಡಿದರು.ಬಿಜೆಪಿಯವರು ಮಾತ್ರ ತಮ್ಮ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಧರಣಿ ಮುಂದುವರಿಸಿದರು. ಇದರ ನಡುವೆಯೇ ಸ್ಪೀಕರ್ ವಿಧೇಯಕಗಳ ಮಂಡನೆಗೆ ಅವಕಾಶ ಕಲ್ಪಿಸಿದರು.
ಮೂರು ವಿಶ್ವ ವಿದ್ಯಾಲಯಗಳ ವಿಧೇಯಕಗಳು, ಕರ್ನಾಟಕ ಋಣ ಪರಿಹಾರ ವಿಧೇಯಕ, ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ, ಶಿಕ್ಷಕರ ವರ್ಗಾವಣೆ ಕಾಯ್ದೆ, ಎಸ್ಸಿ ಎಸ್ಟಿ, ಹಿಂದುಳಿದ ವರ್ಗಗಳ ನೇಮಕ ಹಾಗೂ ಮೀಸಲಾತಿ ತಿದ್ದುಪಡಿ ವಿಧೇಯಕ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ವಿಧೇಯಕ ಸೇರಿ 8 ವಿಧೇಯಕಗಳನ್ನು ಮಂಡಿಸಿ, ಯಾವುದೇ ಚರ್ಚೆ ಯಿಲ್ಲದೇ ಅಂಗೀಕಾರ ಪಡೆದುಕೊಳ್ಳಲಾಯಿತು. ವಿಧೇಯಕಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಸದಸ್ಯರು ಸದನದ ಬಾವಿಯಲ್ಲಿ ನಿಂತು ಘೋಷಣೆಗಳನ್ನು ಕೂಗಿದರು. ನಂತರ ಸ್ಪೀಕರ್ ರಮೇಶ್ ಕುಮಾರ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಭೋಜನ ವಿರಾಮದ ನಂತರವೂ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಈ ನಡುವೆ ಸಭಾಧ್ಯಕ್ಷರು, ತಮ್ಮ ಪರಿಸ್ಥಿತಿಯನ್ನು ಅತ್ಯಾಚಾರಿ ಮಹಿಳೆಗೆ ಹೋಲಿಸಿಕೊಂಡಿರುವುಕ್ಕೆ ಮಹಿಳಾ ಶಾಸಕಿಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತಮ್ಮ ಹೇಳಿಕೆಗೆ ಕ್ಷಮೆ ಕೋರಿ ಆ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿದರು. ನಂತರ ಸದನವನ್ನು ಗುರುವಾರಕ್ಕೆ ಮುಂದೂಡಿದರು.
ಪರಿಷತ್‌ನಲ್ಲೂ ಗದ್ದಲವಿಧಾನ ಪರಿಷತ್: ಹಾಸನದಲ್ಲಿ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ನಡೆದಿರುವ ದಾಳಿ ಖಂಡಿಸಿ ಬಿಜೆಪಿ ಸದಸ್ಯರು ಬುಧವಾರ ಭೋಜನಾ ವಿರಾಮದ ನಂತರ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಗದ್ದಲ -ಕೋಲಾಹಲ ಉಂಟಾಗಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರು ಕಲಾಪವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು. ಬುಧವಾರ ಮಧ್ಯಾಹ್ನದ ಕಲಾಪ ಆರಂಭವಾದಾಗ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಕ್ಕು ಚ್ಯುತಿ ಪ್ರಸ್ತಾಪ ಮಂಡಿಸಿದರು. ಸಭಾಪತಿಯವರು, ಪ್ರಕರಣದ ಪರಿಶೀಲನೆಗಾಗಿ ಹಕ್ಕು ಬಾಧ್ಯತಾ ಸಮಿತಿಗೆ ವರ್ಗಾಯಿಸಿದರು. ನಂತರ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹಾಗನಲ್ ತಾಲೂಕಿನ ಹೇರೂರಿನಲ್ಲಿ ಶಾಲಾ ಮಕ್ಕಳ ಮೆರವಣಿಗೆ ಅಡ್ಡಿ ಪಡಿಸಿದ ಪ್ರಕರಣವನ್ನು ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸಭಾಪತಿಯವರು ಕಲಾಪವನ್ನು ಅರ್ಧಗಂಟೆ ಮುಂದೂಡಿದರು. ಅರ್ಧಗಂಟೆಯ ನಂತರ ಕಲಾಪ ಆರಂಭವಾಗುತ್ತಿದ್ದಂತೆ, ಕೋಟ ಶ್ರೀನಿವಾಸ ಪೂಜಾರಿ, ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಅವರ ಮನೆಗೆ ಆಡಳಿತ ಪಕ್ಷದ ಗೂಂಡಾಗಳು ನುಗ್ಗಿ ದಾಂಧಲೆ ನಡೆಸಿದ್ದಾರೆ. ಪೊಲೀಸರಿಂದ ನಿಯಂತ್ರಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಆದೇಶದಂತೆ ಕೃತ್ಯ ಮಾಡಿದ್ದೇವೆಂದು ಜೆಡಿಎಸ್ ಕಾರ್ಯಕರ್ತರೇ ಹೇಳಿಕೊಂಡಿದ್ದಾರೆ. ಗೂಂಡಾ ರಾಜ್ಯದಲ್ಲಿ ಮಾತ್ರ ಇಂತಹ ಕೃತ್ಯ ನಡೆಯಲು ಸಾಧ್ಯ. ಜೆಡಿಎಸ್ ಮುಖಂಡರು, ಜಿಪಂ, ತಾಪಂ ಸದಸ್ಯರು ಸೇರಿಕೊಂಡಿದ್ದಾರೆ. ಈ ವಿಚಾರದ ಚರ್ಚೆಗೆ ಅವಕಾಶ ನೀಡದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾದಂತಾಗುತ್ತದೆ ಎಂದು ಹೇಳಿದರು. ಸಭಾ ನಾಯಕಿ ಜಯಮಾಲಾ ಮಾತನಾಡಿ, ಅಪ್ರಸ್ತುತ ವಿಷಯಗಳನ್ನು ಪ್ರಸ್ತಾಪಿಸಿ, ಸದನವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುತ್ತಿದ್ದಂತೆ, ಸಚಿವ ಎಂ.ಬಿ.ಪಾಟೀಲ್, ಸದಸ್ಯರಾದ ಎಸ್.ಆರ್.ಪಾಟೀಲ್, ಐವನ್ ಡಿಸೋಜಾ, ಪ್ರಕಾಶ್ ರಾಥೋಡ್, ಎಚ್.ಎಂ.ರೇವಣ್ಣ, ಭೋಜೇಗೌಡ, ರಮೇಶ್‌ಗೌಡ ಮೊದಲಾವರು ದನಿಗೂಡಿಸಿದರು. ಮಧ್ಯಪ್ರವೇಶಿಸಿದ ಸಭಾಪತಿ, ವಿರೋಧ ಪಕ್ಷದವರೇ ಯಾವ ನಿಯಮದಡಿ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದಿರಿ? ಸದನ ಇಷ್ಟು ದಿನ ಹಾಳಾಗಿದೆ. ಇನ್ಮುಂದೆಯೂ ನಡೆಯಲು ಬಿಡುವುದಿಲ್ಲ ಎಂದರೆ
ಹೇಗೆ? ಎಲ್ಲ ವಿಷಯದ ಚರ್ಚೆಗೂ ಒಂದು ನಿಯಮ ಇದೆ. ಅದರಂತೆ ನೋಟಿಸ್ ನೀಡಬೇಕಲ್ಲವೆ? ನಿಮ್ಮ ಇಷ್ಟದಂತೆ ಸದನ ನಡೆಯಲು ಬಿಡುವುದಿಲ್ಲ ಎಂದು ಕಟುವಾಗಿ ಹೇಳಿ ಕಲಾಪ ಮುಂದೂಡಿದರು.