Advertisement
ಮುಂಬಯಿ ಎಂಬ ದೊಡ್ಡ ಶಹರ ! ಮದುವೆಯಾಗಿ ಬಂದ ಆರಂಭದ ದಿನಗಳಲ್ಲಿ ಔತಣದ ಊಟಕ್ಕೆ ಸಂಬಂಧಿಕರು ಕರೆಯಲಾರಂಭಿಸಿದರು. ಅವರ ಮನೆಗೆ ಹೋದ ಸಂದರ್ಭದಲ್ಲಿ, ಕೋಣೆಗಳೇ ಇಲ್ಲದ ಅತಿ ಚಿಕ್ಕ ಮನೆಯನ್ನು ಹಾಗೂ ಅವರ ಜೀವನ ಶೈಲಿಯನ್ನು ನೋಡಿದೆ. ನನ್ನ ಪುಟ್ಟ ಅರಮನೆಯೇ ಎಷ್ಟೋ ವಾಸಿ ಎಂದೆನಿಸಿತು. ಒಂದು ಮಲಗುವ ಕೊಠಡಿ ಮತ್ತು ಅಡುಗೆಕೋಣೆ ಆದರೂ ಇದೆಯಲ್ಲ! ಅಂತ ಸಮಾಧಾನಿಸಿಕೊಂಡೆ. ಆರಂಭದ ದಿನಗಳಲ್ಲಿ ಒಂದೆರಡು ಬಾರಿ ಪತಿರಾಯರು ಬಾಜಿ ಮಾರ್ಕೆಟ್, ಮೀನಿನ ಮಾರ್ಕೆಟ್, ದಿನಸಿ ಅಂಗಡಿ ತೋರಿಸಿ, ಮನೆಯೊಡತಿಯ ಕರ್ತವ್ಯವನ್ನು ಮನದಟ್ಟು ಮಾಡಿಸಿದರು. ಅಂದಿನಿಂದ ಮುಂಬಯಿ ನಗರಿಯ ಜೀವನಕ್ಕೆ ಹೊಂದಿಕೊಳ್ಳಲಾರಂಭಿಸಿದೆ. ಅಕ್ಕಪಕ್ಕದ ಊರವರನ್ನು ಪರಿಚಯ ಮಾಡಿಕೊಂಡೆ. ಕಡಿಮೆ ಬೆಲೆಗೆ ವಸ್ತುಗಳು ಸಿಗುವ ತಾಣವನ್ನು ಅರಸಿದೆ. ಅವರ ಜೊತೆಗೆ ಚೌಕಾಶಿ ಮಾಡುವುದನ್ನೂ ಕಲಿತೆ. ಇಲ್ಲಿನವರು ವ್ಯವಹಾರದ ವೇಳೆಗೆ ಹೆಚ್ಚಾಗಿ ಮರಾಠಿ ಭಾಷೆಯೇ ಮಾತಾಡುತ್ತಾರೆ. ಕೊಂಡ ತರಕಾರಿಗೆ ಎಷ್ಟು ಬೆಲೆ ಎಂಬುದನ್ನು ಕೂಡ ಮರಾಠಿ ಅಥವಾ ಹಿಂದಿ ಭಾಷೆಯಲ್ಲಿಯೇ ಹೇಳುತ್ತಾರೆ. ಡಾಯಿ, ಅಡಾಯಿ ರೂಪಾಯಿ (ಒಂದೂವರೆ, ಎರಡೂವರೆ) ಎಂಬ ಪದಗಳು ಯಾವಾಗಲೂ ಎಡವಟ್ಟಿಗೀಡು ಮಾಡುತ್ತಿದ್ದವು. ಶಾಲೆಯಲ್ಲಿ ಕಲಿತಿದ್ದ ನೂರು ಹಿಂದಿ ಅಂಕೆಗಳಲ್ಲಿ ಇಪ್ಪತ್ತರವರೆಗೆ ಮಾತ್ರ ನೆನಪಿತ್ತು. ಆ ಸಂದರ್ಭದಲ್ಲಿ ಕೈಬಾಯಿ ಸನ್ನೆಯಲ್ಲಿಯೇ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಬೇಕಾದ ಪರಿಸ್ಥಿತಿ ನನ್ನದಾಗಿತ್ತು.
ಹಿಂದೆ ಮನೆಯಲ್ಲಿ ಮೊಬೈಲ್, ಲ್ಯಾಂಡ್‌ಫೋನ್ ಯಾವುದೂ ಇರಲಿಲ್ಲ. ಎಸ್‌ಟಿಡಿ ಬೂತ್‌ಗಳಲ್ಲಿ ವಾರಕ್ಕೊಮ್ಮೆ ಮಾತ್ರ ಊರಿಗೆ ಫೋನ್ ಮಾಡುವ ಅವಕಾಶ ಸಿಗುತ್ತಿತ್ತು. ಊರಿನಲ್ಲಿ ಲ್ಯಾಂಡ್ ಫೋನ್ ಇರುವ ಲಿಲ್ಲಿಬಾಯಿಯ ಮನೆಗೆ ಕರೆ ಮಾಡಿ, ಅಮ್ಮನನ್ನು ಬರಲು ಹೇಳಿ, ಕುಶಲೋಪರಿ ವಿಚಾರಿಸುವಷ್ಟರಲ್ಲಿಯೇ ಫೋನ್ ಬಿಲ್ಲು ನೂರು ರೂಪಾಯಿ ದಾಟುತ್ತಿತ್ತು. ಆದ್ದರಿಂದ ಎಸ್‌ಟಿಡಿ ಬೂತ್‌ನ ಮೀಟರ್‌ನಲ್ಲಿ ಶರವೇಗದಲ್ಲಿ ಓಡುವ ಹಣದ ಮೊತ್ತವನ್ನು ನೋಡಿಕೊಂಡೇ ಆಡುವ ಮಾತುಗಳೆಲ್ಲ ಔಪಚಾರಿಕವೆನಿಸಿ, ಮನದಾಳದ ಮಾತುಗಳು ಅಲ್ಲೇ ಉಳಿದುಬಿಡುತ್ತಿದ್ದವು. ಅಂಚೆಕಚೇರಿ ಕೂಡ ದೂರ ಇದ್ದುದ್ದರಿಂದ ಪತ್ರ ಬರೆಯುವ ಅವಕಾಶವೂ ಸಿಗುತ್ತಿರಲ್ಲಿಲ್ಲ. ಹಳ್ಳಿಯ ಮನೆ ಮತ್ತು ಮನೆಯವರ ಅದೆಷ್ಟೋ ನೆನಪುಗಳು ಮೂರನೆಯ ಮಹಡಿಯ ಮೇಲಿನ, ನಾಲ್ಕು ಗೋಡೆಗಳ ನಡುವಿನ ಅಡುಗೆ ಕೋಣೆಯಲ್ಲಿ ಬೇರೊಂದು ರೀತಿಯಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತಿದ್ದವು. ಮನಸ್ಸಿನ ಖುಷಿಗೆ, ಜೀವನದ ಪ್ರೀತಿಗೆ ಗ್ಯಾಲರಿಯಲ್ಲಿಯೇ ಒಂದು ಕುಂಡದಲ್ಲಿ ತುಲಸೀಗಿಡ ನೆಟ್ಟೆ. ಇತರ ಕುಂಡಗಳಲ್ಲಿ ನೆಟ್ಟ ಗುಲಾಬಿ, ಸೇವಂತಿ, ಅಬ್ಬಲಿಗೆಯ ಗಿಡಗಳಲ್ಲಿ ಹೂಗಳರಳಿ ಗ್ಯಾಲರಿಯನ್ನು ರಂಗೇರಿಸಿದವು. ಚಿಟ್ಟೆಗಳು ಬಂದು ಆಚೀಚೆ ಕುಣಿಯಲಾರಂಭಿಸಿದವು. ಊರಿನಿಂದ ತಂದು ನೆಟ್ಟ ಬಸಳೆ, ತಿಮರೆ (ಒಂದೆಲಗ) ಗಿಡಗಳ ಬಳ್ಳಿಗಳು ಗ್ಯಾಲರಿಯ ಕಂಬಿಗಳನ್ನೆಲ್ಲ ಬಳಸಿಕೊಂಡವು. ಇಲ್ಲಿ ಆಕಾಶವೇ ಅಂಗಳ. ನಿತ್ಯ ಬಂದು ಹೋಗುವ ಸೂರ್ಯ-ಚಂದ್ರ-ತಾರೆಯರು ಹಿಂದಿಗಿಂತಲೂ ಇಂದು ತೀರ ಸನಿಹವಾಗಿ ಇನ್ನಷ್ಟು ಆಪ್ತರಾದರು. ಗ್ಯಾಲರಿಯ ಮೂಲೆಯಲ್ಲಿ ಒಂದು ರಟ್ಟಿನ ಪೆಟ್ಟಿಗೆಯನ್ನು ಇರಿಸಿದ್ದೆ. ಅದರೊಳಗೆ ಬಂದು ಸಂಸಾರ ಹೂಡಿದ ಗುಬ್ಬಚ್ಚಿಗಳು, ಆಗಾಗ ಬಂದು ಹೋಗುವ ಕಾಗೆ, ಪಾರಿವಾಳ ಮತ್ತು ಗಿಳಿಗಳಿಗೆ ಇಷ್ಟವಾದ ಕಾಳನ್ನೀಯುತ್ತ ಅವುಗಳೊಂದಿಗೆ ಆತ್ಮೀಯ ನೇಹದ ಭಾವವನ್ನು ಬೆಳೆಸಿಕೊಂಡೆ.
ಮರಾಠಿ ಮಹಿಳೆಯರ ಅರಸಿನ-ಕುಂಕುಮ
ಪಕ್ಕದ ಮನೆಯ ಮರಾಠಿ ಮಹಿಳೆಯರು ಅರಸಿನ-ಕುಂಕುಮ ಕಾರ್ಯಕ್ರಮಕ್ಕೆ ಕರೆದಾಗ ನಮ್ಮ ಊರಿನ ಮಹಿಳೆಯರ ಜೊತೆಗೆ ನಾನೂ ಹೋಗಲೇ ಬೇಕಾಗಿತ್ತು. ನೌವಾರಿ (ಸೀರೆ) ಉಟ್ಟ ಮಹಿಳೆಯರು ನಮ್ಮ ಹಣೆಗಳಿಗೆ ಅರಸಿನ-ಕುಂಕುಮವಿಟ್ಟ ನಂತರ ಹೂವು-ಹಣ್ಣು-ವೀಳ್ಯದೆಲೆಯನ್ನು ನಮಗೆ ಸೆರಗು ಚಾಚಿ ಸ್ವೀಕರಿಸಲು ಹೇಳುತ್ತಿದ್ದರು. ನಂತರ ನಮ್ಮ ಪಾದ ಮುಟ್ಟಿ ಮೂರು ಬಾರಿ ನಮಸ್ಕರಿಸುತ್ತಿದ್ದರು. ಐವತ್ತು ದಾಟಿದ ಮಹಿಳೆಯರು ಪಾದ ಮುಟ್ಟುವಾಗ ಮುಜುಗರವೆನಿಸುತ್ತಿತ್ತು.
ಆದರೆ, ಇಲ್ಲಿನ ಮಹಿಳೆಯರು ಕಟ್ಟಾಸಂಪ್ರದಾಯಸ್ಥರು. ಪರಂಪರೆಯನ್ನು ಬಿಡಲಾರರು. ಅವರೊಂದಿಗೆ ಸುಮ್ಮನೆ ಹೊಂದಿಕೊಂಡೆ.
Related Articles
Advertisement