ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಖಾಸಗಿ ಕಂಪೆನಿ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವನ್ನು ಭೇದಿಸಿರುವ ಮಾರತ್ತಹಳ್ಳಿ ಠಾಣೆ ಪೊಲೀಸರು, ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಭಾಮೈದ ಅನುರಾಗ್ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಡಿ. 9ರಂದು ಅತುಲ್ ಸುಭಾಷ್, ಪತ್ನಿ ನಿಖೀತಾ ಸಹಿತ ನಾಲ್ವರ ವಿರುದ್ಧ 26 ಪುಟಗಳ ಡೆತ್ನೋಟ್ ಬರೆದಿಟ್ಟು, 90 ನಿಮಿಷಗಳ ಸೆಲ್ಫಿ ವೀಡಿಯೋ ಮಾಡಿಟ್ಟು ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ಸರಕಾರೇತರ ಸಂಸ್ಥೆ, ಸ್ನೇಹಿತರು, ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಿ ತನ್ನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಉತ್ತರ ಪ್ರದೇಶಕ್ಕೆ ತೆರಳಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು.ಆದರೆ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದರು. ಬಳಿಕ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಗುರುಗಾವ್ನ ಪಿಜಿಯಲ್ಲಿ ಅಡಗಿದ್ದ ಪತ್ನಿ ನಿಖಿತಾ, ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಹೊಟೇಲ್ನಲ್ಲಿ ತಲೆಮರೆಸಿಕೊಂಡಿದ್ದ ಅತ್ತೆ ನಿಶಾ ಮತ್ತು ಭಾಮೈದನನ್ನು ಬಂಧಿಸಿದರು. ರವಿವಾರ ಬೆಳಗ್ಗೆ ಬೆಂಗಳೂರಿಗೆ ಕರೆತಂದು, ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಂಬಂಧಿಕರ ಬಳಿ ಮಗು
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಪ್ರತ್ಯೇಕವಾಗಿ ಪರಾರಿಯಾಗಿದ್ದರು. ಇದಕ್ಕೂ ಮೊದಲು ಅತುಲ್ ಪತ್ನಿ ನಿಖಿತಾ ತನ್ನ 4 ವರ್ಷದ ಮಗುವನ್ನು ಸಂಬಂಧಿಕರ ಬಳಿ ಬಿಟ್ಟು ಹೋಗಿದ್ದಳು ಎಂದು ಪೊಲೀಸರು ಹೇಳಿದರು.