Advertisement

ಕಾರ್ಕಳ: ಅತ್ತೂರು ಜಾತ್ರೆಗೆ ಇನ್ನು ಎರಡೇ ದಿನ ಬಾಕಿ: ಸಿದ್ಧತೆಗಳು ಬಹುತೇಕ ಪೂರ್ಣ

11:22 PM Jan 19, 2023 | Team Udayavani |

ಕಾರ್ಕಳ: ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ ಎಂಬುದು ಪ್ರತೀತಿ. ಆ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ಜನಸಾಗರವೇ ಹರಿದು ಬರುತ್ತದೆ. ಜ. 22ರಿಂದ 26ರ ತನಕ ನಡೆಯುವ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಇನ್ನು ಎರಡೇ ದಿನ ಬಾಕಿ. ಸಿದ್ಧತೆಗಳು ಬಹುತೇಕ ಪೂರ್ತಿಯಾಗುತ್ತಿದೆ.

Advertisement

ಭಾವೈಕ್ಯದ ಕ್ಷೇತ್ರವಾದ ಸಂತ ಲಾರೆನ್ಸ್‌ ಚರ್ಚ್‌ಗೆ ವಿಶೇಷವಾಗಿ ವಿದ್ಯುತ್‌ ದೀಪ ಅಲಂಕಾರ ಮಾಡಲಾಗುತ್ತಿದೆ. ಸಹಸ್ರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಜಿಲ್ಲಾಡಳಿತದ ಸಹಕಾರ ದೊಂದಿಗೆ ನಡೆದಿವೆ ಎಂದು ಬಸಿಲಿಕಾದ ವಂ| ಆಲ್ವನ್‌ ಡಿ’ಸೋಜಾ ಮಾಹಿತಿ ನೀಡಿದ್ದಾರೆ.

“ನೀವು ನನಗೆ ಸಾಕ್ಷಿಗಳಾಗುವಿರಿ’ ಎಂಬುದು ಈ ಬಾರಿಯ ವಿಷಯ. ಒಟ್ಟು 35 ಬಲಿಪೂಜೆಗಳು ನಡೆಯಲಿವೆ. ಜ. 22ರ ಪೂರ್ವಾಹ್ನ 10ಕ್ಕೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ರೈ|ರೆ|ಡಾ| ಜೆರಾಲ್ಡ್‌ ಐಸಾಕ್‌ ಲೋಬೋ, ಜ. 23ರ ಬೆಳಗ್ಗೆ 10ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ರೈ|ರೆ|ಡಾ| ಗೀವರ್ಗಿಸ್‌ ಮಾರ್‌ ಮಕರಿಯೋಸ್‌ ಕಲಾಯಿಲ್‌, ಜ. 24ರಂದು ಸಂಜೆ 6ಕ್ಕೆ (ಕನ್ನಡ) ಬೆಳ್ತಂಗಡಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್‌ ಮುಕ್ಕುಯಿ, ಜ. 25ರ ಬೆಳಗ್ಗೆ 10ಕ್ಕೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ, ಜ. 26ರ ಬೆಳಗ್ಗೆ 10ಕ್ಕೆ (ಕೊಂಕಣಿ) ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ರೈ|ರೆ|ಡಾ| ಬರ್ನಾರ್ಡ್‌ ಮೊರಾಸ್‌ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಿಸಲಿರುವರು.
ಪ್ರತೀ ದಿನ ಪೂರ್ವಾಹ್ನ 8, 10, 12, ಅಪರಾಹ್ನ 2, 4, 6, 8 ಗಂಟೆಗೆ ಬಲಿಪೂಜೆಗಳು ನಡೆಯಲಿವೆ. ಜ. 21ರಂದು ಮಧ್ಯಾಹ್ನ 3.30ಕ್ಕೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಪರಮ ಪ್ರಸಾದದ ಮೆರವಣಿಗೆ ಇರಲಿದೆ.

ಭಿಕ್ಷಾಟನೆ ನಿಷೇಧ
ಅತ್ತೂರು ಜಾತ್ರೆ ವೇಳೆ ಅನಾದಿ ಕಾಲ ದಿಂದಲೂ ಭಿಕ್ಷಾಟನೆಗೆ ಮಹತ್ವ ಇದೆ. ಅದಕ್ಕಾಗಿ ಭಿಕ್ಷಾ ಪಾತ್ರೆ (ಕಾಣಿಕೆ ಡಬ್ಬಿ) ಇರಿಸಲಾಗುತ್ತಿತ್ತು. ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ – 1975ರನ್ವಯ ಭಿಕ್ಷಾಟನೆ ಅಪರಾಧವಾಗಿರುವುದರಿಂದ ಮಹೋ ತ್ಸವದ ಅಂತಿಮ ದಿನದಂದು ಭಿಕ್ಷುಕರಿಗೆ ಆಹಾರದ ಪೊಟ್ಟಣದ ಜತೆಗೆ ಹಣ (ಭಿಕ್ಷೆ) ನೀಡುವ ಕ್ರಮವನ್ನು ಕೈಬಿಡಲಾಗಿದೆ. ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುವ ಸಾಂಪ್ರದಾಯಿಕ ಭಿಕ್ಷಾಟನೆ ಬಗ್ಗೆ ಸಾಧಕ ಬಾಧಕಗಳನ್ನು ಚರ್ಚಿಸಿ ಜಿಲ್ಲಾಡಳಿತದ ನಿರ್ದೇಶನದಂತೆ ಮಂದಿನ ವರ್ಷ ಕ್ರಮ ಕೈಗೊಳ್ಳುವ ಭರವಸೆಯನ್ನು ಧರ್ಮಗುರುಗಳು ನೀಡಿದ್ದಾರೆ.

ಬಸಿಲಿಕಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂತೋಷ್‌ ಡಿ’ಸಿಲ್ವ, ಪ್ರಧಾನ ಕಾರ್ಯದರ್ಶಿ ಬೆನೆಡಿಕ್ಟ್ ನೊರೋನ್ಹಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next