ಮೈಸೂರು: ವಿವಿಧ ಬಗೆಯ ಹಣ್ಣು-ತರಕಾರಿಗಳು, ಹಲವು ಜಾತಿಯ ಪ್ರಾಣಿ-ಪಕ್ಷಿಗಳು, ಹೀಗೆ ಕಲಾವಿದ ನಿಸಾರ್ ಅಹಮ್ಮದ್ ಅವರು ಥರ್ಮಕೋಲ್ ಬಳಸಿ ರಚಿಸಿರುವ ಕಲಾಕೃತಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ನಗರದ ರಾಮಾನುಜ ರಸ್ತೆಯ ನಗರದಲ್ಲಿನ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಶನಿವಾರ ನಡೆದ ಶಿಲ್ಪಗಳ ಪ್ರದರ್ಶನ ಮತ್ತು ಕಲಾವಿದರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಕಲಾವಿದ ನಿಸಾರ್ ಅಹಮ್ಮದ್ ಅವರ ಕೈಚಳಕದಲ್ಲಿ ಅರಳಿದ ವಿವಿಧ ಬಗೆಯ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿತು.
ಥರ್ಮಕೋಲ್‌ನಿಂದ ಮಾಡಲಾಗಿದ್ದ ಜಿಂಕೆ, ಜಿರಾಫೆ, ಸಿಂಹ, ಹುಲಿ, ಕಾಡೆಮ್ಮೆ, ಆನೆ, ಹೀಗೆ ಇನ್ನೂ ಹಲವು ಪ್ರಾಣಿಗಳು ಒಂದೆಡೆಯಾದರೆ. ಗಾಜಿನ ಒಳಗಿದ್ದ ಕೊಕ್ಕರೆ, ತೂಗುಯ್ನಾಲೆ, ಎತ್ತು, ಹಸು ಮುಂತಾದವು ಕಲಾವಿದ ನಿಸಾರ್ ಅಹಮ್ಮದ್ ಅವರ ಕೈಚಳಕ್ಕೆ ಸಾಕ್ಷಿಯಾಗಿದ್ದವು.
ಪ್ರದರ್ಶನದ ವೇಳೆ ಮಾತನಾಡಿದ ಕಲಾವಿದ ನಿಸಾರ್ ಅಹಮ್ಮದ್, ತನ್ನ ಮಗಳ ಶಾಲೆಯಲ್ಲಿ ಶಿಕ್ಷಕರು ಥರ್ಮಕೋಲ್‌ನಿಂದ ಚಿತ್ರಗಳನ್ನು ಮಾಡಿ ತರಲು ಹೇಳಿದ್ದರು. ಕಾಸುಕೊಟ್ಟು ಥರ್ಮಕೋಲ್ ತರಲು ಕಷ್ಟವಾಗಿತ್ತು. ಆಗ ಬೀದಿಯಲ್ಲಿ ಬಿದ್ದಿದ್ದ ಥರ್ಮಕೋಲ್ ಬಳಸಿ ಚಿತ್ರಗಳನ್ನು ಮಾಡಿಕೊಟ್ಟೆ. ಶಿಕ್ಷಕರು ಯಾರು ಮಾಡಿಕೊಟ್ಟದ್ದು ಅವರನ್ನು ಕರೆದುಕೊಂಡು ಬಾ ಎಂದು ಕಳುಹಿಸಿದರು. ತನ್ನ ಮಗಳು ಕರೆದುಕೊಂಡು ಹೋದಳು.
ಆಗ ಶಿಕ್ಷಕರು ತನ್ನನ್ನು ಹೊಗಳಿ ಪ್ರೋತ್ಸಾಹಿ ಕಳುಹಿಸಿದರು. ಅಲ್ಲಿಂದ ಕಲಾಕೃತಿಗಳನ್ನು ಮಾಡುವ ಹವ್ಯಾಸ ಶುರುವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು. ಸ್ನೇಹ ಸಿಂಚನ ಟ್ರಸ್ಟ್‌ನ ಅಧ್ಯಕ್ಷೆ ಮ.ನ.ಲತಾ ಮೋಹನ್, ಹಿರಿಯ ಕಲಾವಿದ ಸೈಯದ್ ಮುನಾವರ್ ಹುಸೇನ್, ಕಲಾ ಶಿಕ್ಷಕ ಮನೋಹರ್, ಮೈಸೂರು ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್.ಶಿವಲಿಂಗಪ್ಪ. ಡಾ.ಜಮುನಾರಾಣಿ ಮಿರ್ಲೆ ಇದ್ದರು.