ಮೈಸೂರು: ದಸರಾ ಪ್ರಯುಕ್ತ ಈ ವರ್ಷ ನಗರದ ರಸ್ತೆಗಳಲ್ಲಿ 75 ಕಿ.ಮೀ. ಹಾಗೂ 91 ವೃತ್ತಗಳಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರ ಮಾಡ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಂಜಿನಿಯರ್‌ಗಳು ಹಾಗೂ ನಗರದ ವಿದ್ಯುತ್ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆ ಮಾದರಿ ದೀಪಾಲಂಕಾರ ಮಾಡ ಲಾಗುವುದು. ಕಳೆದ ವರ್ಷ 54 ಕಿ.ಮೀ. ಹಾಗೂ 49 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ ದೀಪಾಲಂಕಾರದಲ್ಲಿ ಕೆಲ ಬದಲಾವಣೆ ಮಾಡಿದ್ದು, ನಗರದ ಹೊರ ವರ್ತುಲ ರಸ್ತೆಯ 42 ಕಿ.ಮೀ. ರಸ್ತೆಗೂ ದೀಪಾಲಂಕಾರ ಮಾಡ ಲಾಗುವುದು. ಜೊತೆಗೆ ಸದ್ಯ ಆಯ್ಕೆ ಮಾಡಿ ರುವ 91 ವೃತ್ತಗಳಲ್ಲದೇ ಇನ್ನೂ ಜನನಿಬಿಡ ವೃತ್ತಗಳಿದ್ದರೆ ಅವುಗಳನ್ನೂ ಸೇರ್ಪಡೆ ಮಾಡಲಾಗು ವುದು ಎಂದರು.
ಇದೇ ಮೊದಲ ಬಾರಿಗೆ ಚಾಮರಾಜನಗರ ದಸರೆಗೆ 15 ಲಕ್ಷ ರೂ. ಹಾಗೂ ಶ್ರೀರಂಗಪಟ್ಟಣ ದಸರೆಗೆ 10 ಲಕ್ಷ ರೂ. ವೆಚ್ಚದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ದೀಪಾ ಲಂಕಾರ ಮಾಡಿಸಲಾಗುತ್ತಿದೆ.
ಗಡುವು: ಸೆ.25ರೊಳಗೆ ವಿದ್ಯುತ್ ದೀಪಾಲಂಕಾರ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜಂಬೂಸವಾರಿ ಮುಗಿದ ಮರು ದಿನ ದೀಪಾಲಂಕಾರವು ಸ್ಥಗಿತಗೊಳ್ಳಲಿದೆ ಎಂಬ ದೂರುಗಳಿರುವುದರಿಂದ, ದಸರಾ ನಂತರ ಮೈಸೂರಿಗೆ ಬರುವ ಪ್ರವಾಸಿಗರಿಗೆ ಉಲ್ಲಾಸ ತರಲು ದಸರೆ ಉದ್ಘಾಟನೆ ದಿನದಿಂದ ಚಾಮುಂಡೇಶ್ವರಿಯ ತೆಪ್ಪೋತ್ಸವದವರೆಗೂ ಈ ಬಾರಿ ನಗರದಲ್ಲಿ ದೀಪಾಲಂಕಾರ ಇರಲಿದೆ. ವಿದ್ಯುತ್ ದೀಪಾಲಂಕಾರಕ್ಕೆ ಸುಮಾರು 3.5 ಕೋಟಿ ವೆಚ್ಚ ತಗುಲಲಿದ್ದು, ಈ ಹಣವನ್ನು ಸೆಸ್ಕ್ ಭರಿಸಲಿದೆ ಎಂದರು.
ನಿಯೋಜನೆ: ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಮಾತನಾಡಿ, ವಿದ್ಯುತ್ ದೀಪಾಲಂ ಕಾರ ಸುಮಾರು 15 ದಿನಗಳ ಕಾಲ ಇರಲಿದ್ದು, ಪ್ರತಿ ವೃತ್ತಕ್ಕೆ ಒಬ್ಬ ಇಂಜಿನಿಯರ್ ಮತ್ತು ಲೈನ್‌ಮನ್‌ನ್ನು ನಿಯೋಜಿಸಲಾಗುವುದು. ಜೊತೆಗೆ ದಿನದ 24 ಗಂಟೆ ಕಾಲ ಸರ್ವೀಸ್ ವಾಹನ ಕೂಡ ಕಾರ್ಯಾ ಚರಣೆಯಲ್ಲಿರಲಿದೆ. ಪ್ರವಾಸಿಗರು ಮತ್ತು ಸಾರ್ವ ಜನಿಕರು ವಿದ್ಯುತ್ ದೀಪಾಲಂಕಾರವನ್ನು ನೋಡಿ ಆನಂದಿಸಿ, ಆದರೆ, ವಿದ್ಯುತ್ ದೀಪಾಲಂ ಕಾರವನ್ನು ಮುಟ್ಟುವುದು, ಸೆಲ್ಫಿ ತೆಗೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.
ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮೊದಲಾದವರು ಸಭೆಯಲ್ಲಿದ್ದರು.