ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.
ಹೈಕೋರ್ಟ್‌ನಲ್ಲಿ ಸದ್ಯ 29 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಶೀಘ್ರ ಭರ್ತಿ ಮಾಡುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನಮಂತ್ರಿ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಕೇಂದ್ರದ ಅಟಾರ್ನಿ ಜನರಲ್ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇರುವುದರಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚಾಗುತ್ತಿದೆ. ಅಲ್ಲದೇ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಆ ಪೈಕಿ 33 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಬೆಂಗಳೂರು ಪ್ರಧಾನ ಪೀಠದಲ್ಲಿ 23, ಧಾರವಾಡದಲ್ಲಿ 6 ಹಾಗೂ ಕಲಬುರಗಿಯಲ್ಲಿ 4 ನ್ಯಾಯಮೂರ್ತಿಗಳಿದ್ದಾರೆ. ರಾಜ್ಯ ಹೈಕೋರ್ಟ್‌ನಲ್ಲಿ ಪ್ರಸ್ತುತ 3.25 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಬಾಕಿ ಪ್ರಕರಣ ಸಂಖ್ಯೆ ಹೆಚ್ಚಿರುವುದರಿಂದ ತ್ವರಿತ ನ್ಯಾಯ ಸಿಗದೆ ಕಕ್ಷೀದಾರರು ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ ಕಳೆದ 2018ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಕೊಲಿಜಿಯಂ 9 ಮಂದಿ ವಕೀಲರ ಹೆಸರನ್ನು ನ್ಯಾಯಮೂರ್ತಿಗಳ ಹುದ್ದೆಗಳಿಗೆ ಶಿಫಾರಸು ಮಾಡಿತ್ತು. ಆ ಕಡತ ಇನ್ನೂ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಆ ನೇಮಕ ಪ್ರಸ್ತಾವಕ್ಕೆ ಆದಷ್ಟು ಬೇಗ ಅನುಮೋದನೆ ನೀಡಬೇಕು ಎಂದು ಅವರು ಕೋರಿದ್ದಾರೆ.