Advertisement

ಗಮನ ಸೆಳೆದ ಕವಿಗೋಷ್ಠಿ: 20 ಕವಿಗಳಿಂದ ಕವನ ವಾಚನ

02:52 PM Mar 27, 2017 | |

ಧಾರವಾಡ: ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ದ್ವಿತೀಯ ದಿನ ನಡೆದ  ಕವಿಗೋಷ್ಠಿ ಗಮನ ಸೆಳೆಯುವಲ್ಲಿ ಯಶಸ್ವಿಗೊಂಡಿತು. ಕವಿಗಳು ವೈಯಕ್ತಿಕ ಅನುಭವ, ಸಾಮಾಜಿಕ ಪಲ್ಲಟ, ವಾಸ್ತವ ಸ್ಥಿತಿಗತಿ, ಆದರ್ಶಗಳು, ಪ್ರೇಮ ಭಾವನೆಗಳು, ಮಾತೆ, ಮಾತೃಭೂಮಿ, ಹೆಣ್ಣು ಭ್ರೂಣ ಹತ್ಯೆ ಮೊದಲಾದ ಕವಿತೆಗಳನ್ನು ಪ್ರಸ್ತುತಪಡಿಸಿದರು.

Advertisement

ಕವಿಗೋಷ್ಠಿ ಏಕತಾನತೆಯಿಂದ ದೂರ ಉಳಿದಿದ್ದರಿಂದ ಶ್ರೋತೃಗಳಿಗೆ ಇಷ್ಟವಾಯಿತು. 6 ಮಹಿಳಾ ಕವಿಗಳು ಸೇರಿದಂತೆ ಒಟ್ಟು 20 ಕವಿಗಳು ಕವನ ವಾಚಿಸಿದರು. ಯುವ ಕವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕವನ ವಾಚಿಸಿದ್ದು ವಿಶೇಷ. ಎಸ್‌. ಎಸ್‌.ಚಿಕ್ಕಮಠ, ಜೋಸೆಫ್‌ ಮಲ್ಲಾಡಿ, ಐ.ಎನ್‌.ಜಾವೂರ, ಶಿವಕುಮಾರ ಹಿರೇಮಠ ಗ್ರಾಮೀಣ ಶೈಲಿಯಲ್ಲಿ ಬರೆದ ಕವನಗಳನ್ನು ಓದಿದರೆ, ಚಂದ್ರಶೇಖರ ಮಾಡಲಗೇರಿ, ಶಿಲ್ಪಾ ಸಿದ್ದರಾಮ ಶೆಟ್ಟರ ಪ್ರೇಮ ನಿವೇದನೆ ಕುರಿತ ಕವನ ವಾಚಿಸಿದರು.

ಜೋಸೆಫ್‌ ಮಲ್ಲಾಡಿಯ ಕವನ ಪ್ರೀತಿ, ಪ್ರೇಮದ ಪಥದಲ್ಲಿ ಸಾಗಿ ಕೊನೆಗೆ ಮಹತ್ವದ ಸಂದೇಶ ನೀಡಿತು. ಕುಮಾರ ಬೇಂದ್ರೆ “ಒಲವಧಾರೆ’ ಅರ್ಥಗರ್ಭಿತ  ಕವನದ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಸುಧಾ ಮರಿಗೌಡರ “ತಾಯಿ ಭೂತಾಯಿ ಗರ್ಭ’, ರೂಪಾ ಜೋಶಿ “ಧರೆ ಹೊತ್ತಿ ಉರಿದರೆ’ ಡಾ|ಸಿದ್ದಲಿಂಗೇಶ ಹಂಡಗಿ “ಸೃಷ್ಟಿಸುವವಳು ಬದುಕಬೇಕು’ ಕವನದ  ಮೂಲಕ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಧ್ವನಿ ಎತ್ತಿದರು.

ಲಕೀಕಾಂತ ಇಟ್ನಾಳ “ಕಾಡಿನ ಚಿತ್ರಣ’, ಸುಭಾಷ ಚವ್ಹಾಣ “ಕಾಡು’, ಪರಿಸರ ಕುರಿತ ಕವನ ವಾಚಿಸಿದರು. ನಿರ್ಮಲಾ ಶೆಟ್ಟರ ಕೋಮು ಸದ್ಭಾವನೆ ಬಿಂಬಿಸುವ ಗಜಲ್‌ ಮೂಲಕ ಗಮನ ಸೆಳೆದರೆ, ಗಂಗಾಧರ ಗಾಡದ, ಡಾ|ಎಂ. ಎಂ.ಕಲಬುರ್ಗಿ ಅವರ ಕುರಿತ “ತೆನೆ ಗೊನೆ ಮನ’ ಕವನ ಚುಟುಕೆನಿಸಿತು.

ಸಾಹಿತಿಯ ಅಂತ್ಯಕಾಲದಲ್ಲಿ ಪ್ರಶಸ್ತಿ, ಪುರಸ್ಕಾರ ನೀಡುವುದನ್ನು ಖಂಡಿಸಿ ಮಹಮ್ಮದ್‌ ಅಲಿ ಗೂಡುಭಾಯಿ ವಾಚನ ಮಾಡಿದ “ಪ್ರಶಸ್ತಿ ಬೇಕಾಗಿಲ್ಲ’ ಕವನ ಸಂದರ್ಭಕ್ಕೆ ತಕ್ಕದಾಗಿತ್ತು. ಮಹಾಂತಪ್ಪ ನಂದೂರ “ಮುಖಾಮುಖೀ’, ಅನುಸೂಯಾ ಹಿರೇಮಠ “ನಮ್ಮವರ ಪಯಣ’, ಪೊ|ಎಸ್‌.ಆರ್‌.ಆಶಿ “ದುಗುಡವಿದೆ’ ಕವನ ಓದಿದರು. ಕವಿಗೋಷ್ಠಿಯಲ್ಲಿ ಯುವ ಕವಿಗಳು, ಹಿರಿಯ ಕವಿಗಳು ಪಾಲ್ಗೊಂಡಿದ್ದರಿಂದ ವಿವಿಧ ಬಗೆಯ ಕವಿತೆಗಳನ್ನು ಆಲಿಸುವ ಅವಕಾಶ ಲಭಿಸಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next