ಬೆಂಗಳೂರು: ಕಟ್ಟಡ ಗುತ್ತಿಗೆದಾರರೊಬ್ಬರ ಕಾರು ಚಾಲಕನ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ಕಾರಿನಲ್ಲಿದ್ದ ನಾಲ್ಕು ಲಕ್ಷ ರೂ. ಕಳವು ಮಾಡಿ ಪರಾರಿಯಾಗಿರುವ ಘಟನೆ ಕೆ.ಆರ್.ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ರಿಚ್ಮಂಡ್ ಟೌನ್ ನಿವಾಸಿ ಮೊಹಮ್ಮದ್ ಖಲೀಲ್ ಹಣ ಕಳೆದುಕೊಂಡ ಗುತ್ತಿಗೆದಾರ. ಈ ಸಂಬಂಧ ಕೆ.ಆರ್.ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಖಲೀಲ್ ತಮ್ಮ ಸ್ನೇಹಿತರೊಬ್ಬರ ಜತೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮಾಡಲು ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಬಿವಿಕೆ ಅಯ್ಯಂಗಾರ್ ರಸ್ತೆಯ ಗಣೇಶ ದೇವಸ್ಥಾನದ ಬಳಿ ಬಂದಿದ್ದು, ತಮ್ಮ ಕಾರನ್ನು ನಿಲ್ಲಿಸಿ ಚಾಲಕನನ್ನು ಕಾರಿನಲ್ಲೇ ಇರಲು ಹೇಳಿ ಎಲೆಕ್ಟ್ರಾನಿಕ್ ವಸ್ತು ಮಾರಾಟ ಮಳಿಗೆಗೆ ಹೋಗಿದ್ದರು.
ನಾಲ್ಕು ಲಕ್ಷ ರೂ. ಮೌಲ್ಯದ ಹಣದ ಬ್ಯಾಗ್‌ನ್ನು ಕಾರಿನಲ್ಲೇ ಇಟ್ಟಿದ್ದರು. ಕೆಲ ಹೊತ್ತಿನ ಬಳಿಕ ಕಾರಿನ ಸಮೀಪದ ಬಂದ ಮೂವರು ಅಪರಿಚಿತರು, ತಮ್ಮ ಕಾರು ತೆಗೆಯಬೇಕಿದೆ. ನಿಮ್ಮ ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ಆಗ ಚಾಲಕ ಕಾರನ್ನು ಹಿಂದೆ ತೆಗೆದುಕೊಳ್ಳುವಾಗ, ಆರೋಪಿಗಳ ಪೈಕಿ ಒಬ್ಟಾತ 10 ರೂ. ಮುಖಬೆಲೆಯ ನೋಟು ನೆಲದ ಮೇಲೆ ಹಾಕಿ, ನಿಮ್ಮ ಹಣ ಕೆಳಗೆ ಬಿದ್ದಿದ್ದೆ ನೋಡಿ ಎಂದು ಹೇಳಿದ್ದಾನೆ. ಆದರೆ, ಕಾರಿನ ಚಾಲಕ ನಿರ್ಲಕ್ಷ್ಯ ಮಾಡಿದ್ದಾರೆ.
ನಂತರ ಮತ್ತೂಬ್ಬ ಆರೋಪಿ ಕೆಳಗೆ ಬಿದ್ದಿದ್ದ ನೋಟನ್ನು ಎತ್ತಿಕೊಂಡು ಚಾಲಕನಿಗೆ ಕೊಡಲು ಮುಂದಾಗಿದ್ದು, ಆತನ ಗಮನ ಬೇರೆಡೆ ಸೆಳೆದಿದ್ದಾನೆ. ಆಗ ಮತ್ತೂಬ್ಬ ಆರೋಪಿ ಕಾರಿನ ಸೀಟಿನ ಮೇಲಿದ್ದ ಹಣದ ಬ್ಯಾಗ್‌ನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಖಲೀಲ್, ಚಾಲಕನಿಂದ ಮಾಹಿತಿ ಪಡೆದು ಕೆ.ಆರ್.ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಚಾಲಕನಿಂದ ಘಟನೆ ಬಗ್ಗೆ ವಿವರ ಪಡೆದುಕೊಂಡು, ಸ್ಥಳೀಯ ಸಿಸಿಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.