Advertisement

ಗಮನ ಬೇರೆಡೆ ಸೆಳೆದು ಆಭರಣ-ನಗದು ಕಳ್ಳತನ

10:16 AM Feb 04, 2022 | Team Udayavani |

ಚಿತ್ತಾಪುರ: ಪಟ್ಟಣದ ಬಸ್‌ ನಿಲ್ದಾಣ ಹತ್ತಿರ ಬಂಗಾರ ವ್ಯಾಪಾರಿಯ ಅಂದಾಜು 15.20 ಲಕ್ಷ ರೂ. ಮೌಲ್ಯದ 380 ಗ್ರಾಂ ಬಂಗಾರ ಆಭರಣ ಮತ್ತು 1.50 ಲಕ್ಷ ರೂ. ಹಣವಿರುವ ಬ್ಯಾಗ್‌ ಕಳ್ಳತನವಾಗಿರುವ ಪ್ರಕರಣ ಬುಧವಾರ ಸಂಜೆ ನಡೆದಿದೆ.

Advertisement

ಕಲಬುರಗಿ ಬಸವೇಶ್ವರ ಕಾಲೋನಿಯಲ್ಲಿ ವಾಸವಿರುವ ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಚೋಟಿ ನಿವಾಸಿ ನಾಗಯ್ಯ ಸ್ವಾಮಿ ಪಟ್ಟಣದಲ್ಲಿನ ಬಂಗಾರದ ಅಂಗಡಿಗಳಿಗೆ ಬಂಗಾರದ ಮೂಗಿನ ಕಡ್ಡಿ, ಇತರೆ ಬಂಗಾರ ಸಾಮಾನು ಮಾರಾಟ ಮಾಡಿ ಮರಳಿ ಕಲಬುರಗಿಗೆ ಹೋಗುವಾಗ ಕಳ್ಳತನ ನಡೆದಿದೆ.

ನಾಗಯ್ಯ ಸ್ವಾಮಿ ಅವರು ಬಸ್‌ ನಿಲ್ದಾಣಕ್ಕೆ ಬಂದು ಬಸ್‌ ಹತ್ತುವಾಗ ಅಪರಿಚಿತ ವ್ಯಕ್ತಿಯೊಬ್ಬ ಅವರ ಹತ್ತಿರ ಬಂದು ನಿಮ್ಮ ಅಂಗಿ ಮೇಲೆ ಯಾರೋ ವಾಂತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾಗಯ್ಯ ಸ್ವಾಮಿ ಅವರು ಸಮೀಪದ ಹೊಟೇಲ್‌ ಹತ್ತಿರ ಹೋಗಿ ಅಂಗಿ ತೊಳೆದುಕೊಳ್ಳಲು ಮುಂದಾದಾಗ ಅಪರಿಚಿತ ವ್ಯಕ್ತಿಯೇ ನೀರು ಹಾಕಿ ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಗಾರ ಸಾಮಾನು ಮತ್ತು ನಗದು ಹಣವಿದ್ದ ಬ್ಯಾಗ್‌ ಕುರ್ಚಿಯ ಮೇಲಿಟ್ಟು ನಾಗಯ್ಯ ಅವರು ಅಂಗಿ ತೊಳೆದುಕೊಳ್ಳುವಾಗ ನೀರು ಹಾಕಿ ಸಹಾಯ ಮಾಡಿದ ವ್ಯಕ್ತಿ ಬಸ್‌ ಹೋಗುತ್ತಿದೆ ನಾನು ಹೋಗುತ್ತೇನೆ ಎಂದು ತೆರಳಿದ್ದಾರೆ. ಅಂಗಿ ತೊಳೆದುಕೊಂಡು ತಿರುಗಿ ನೋಡುವಷ್ಟರಲ್ಲಿ ಕುರ್ಚಿ ಮೇಲಿಟ್ಟಿದ್ದ ಬಂಗಾರ ಮತ್ತು ನಗದು ಹಣವಿದ್ದ ಬ್ಯಾಗ್‌ ನಾಪತ್ತೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಾಗಯ್ಯ ಸ್ವಾಮಿ ಅವರು ಆಂಧ್ರಪ್ರದೇಶದ ವಿಜಯವಾಡದಿಂದ ಬಂಗಾರ ಆಭರಣ ತಂದು ಕಲಬುರಗಿ, ಸೇಡಂ, ಚಿತ್ತಾಪುರ ಮುಂತಾದೆಡೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಸಂಜೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

Advertisement

ಬಸ್‌ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೆರಾ ಕುರಿತು ಮಾಹಿತಿ ಪಡೆಯಲು ಮುಂದಾದಾಗ ಕಳ್ಳತನ ಪ್ರಕರಣ ನಡೆದಿರುವ ಕಡೆಗೆ ಇದ್ದ ಸಿಸಿ ಕ್ಯಾಮೆರಾ ದುರಸ್ತಿಗೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ. ಗುರುವಾರ ಬೆಳಗ್ಗೆ ಶಹಾಬಾದ ಡಿವೈಎಸ್ಪಿ ಉಮೇಶ ಚಿಕ್ಕಮಠ ಅವರು ಘಟನಾ ಸ್ಥಳಕ್ಕೆ ಆಗಮಿಸಿ ನಾಗಯ್ಯ ಸ್ವಾಮಿ ಅವರನ್ನು ವಿಚಾರಿಸಿ ಕಳ್ಳತನ ಘಟನೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಎ.ಎಸ್‌ ಪಟೇಲ್‌ ಇದ್ದರು. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ತಾಪುರ ಪಟ್ಟಣದಲ್ಲಿ ಇತ್ತೀಚೆಯ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೇಯೇ ಬಸ್‌ ನಿಲ್ದಾಣದ ಹತ್ತಿರದ ಎಸ್‌ಬಿಎಚ್‌ ಬ್ಯಾಂಕ್‌ನಿಂದ ಹಣ ಪಡೆದುಕೊಂಡು ಹೊರಗಡೆ ಬರುವಷ್ಟರಲ್ಲಿಯೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಪಟ್ಟಣದ ಸ್ಟೇಷನ್‌ ತಾಂಡಾದಲ್ಲಿ ಹಗಲು ಹೊತ್ತಿನಲ್ಲಿ ಮನೆಯ ಕೀಲಿ ಕೈ ಮುರಿದು ಕಳ್ಳತನ ಮಾಡಿದ್ದರು. ಬೈಕ್‌ ಕಳ್ಳತನಗಳು ವ್ಯಾಪಕವಾಗಿ ನಡೆದಿವೆ. ಇದೀಗ ಬಂಗಾರ ಆಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಇಲ್ಲಿಯ ವರೆಗೆ ಮಾತ್ರ ಕಳ್ಳರು ಮಾತ್ರ ಸಿಕ್ಕಿಲ್ಲ. ಹೀಗಾಗಿ ಪಟ್ಟಣದ ಜನತೆಯಲ್ಲಿ ಆತಂಕ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next