Advertisement

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವ ಪ್ರಯತ್ನ ಅಪಾಯಕಾರಿ

01:27 AM Jan 30, 2020 | mahesh |

ಮಹಾನಗರ: ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಅಥವಾ ಭಿನ್ನಾಭಿಪ್ರಾಯ ಪ್ರಕಟಿಸಲು ಮುಕ್ತ ಅವಕಾಶ ಇದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ವಿರೋಧ ಅಭಿಪ್ರಾಯ ಗಳನ್ನು ಹತ್ತಿಕ್ಕುವ ಯತ್ನಗಳು ನಡೆ ಯುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ. ಇದರಿಂದ ಪ್ರಜಾ ಪ್ರಭುತ್ವ ವ್ಯವಸ್ಥೆಯೇ ಬಿಕ್ಕಟ್ಟಿನಲ್ಲಿದೆ ಎಂದು ಮಾಜಿ ಶಿಕ್ಷಣ ಸಚಿವ ಪ್ರೊ| ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯ ಪಟ್ಟರು.

Advertisement

ಬುಧವಾರ ನಗರದ ಸಂತ ಅಲೋಶಿ ಯಸ್‌ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ನೆಹರೂ ಚಿಂತನ ಕೇಂದ್ರದ ಸಹಯೋಗದಲ್ಲಿ ನಡೆದ “ಡಿಬೇಟಿಂಗ್‌ ಗಾಂಧಿ’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಟನೆ ಎನ್ನುವುದು ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಇರುವ ಒಂದು ಅವಕಾಶ. ಅದು ಯಾವುದೇ ರೂಪದಲ್ಲಿದ್ದರೂ ಅದು ಶಾಂತಿಯುತ ಆಗಿರಬೇಕೆಂದು ಮಹಾತ್ಮಾ ಗಾಂಧಿ ಹೇಳಿದ್ದರು. ಯಾವುದೇ ವಿಚಾರದ ಬಗ್ಗೆ ಸಾರ್ವತ್ರಿಕ ಜನಾಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸುವುದು ಪ್ರಜಾತಂತ್ರ ವ್ಯವಸ್ಥೆಯ ಮುಖ್ಯ ಲಕ್ಷಣವೂ ಹೌದು ಎಂದರು.

ಸ್ವಾತಂತ್ರ್ಯ ಹೋರಾಟ ಮತ್ತು ಸಮಾಜ ಸುಧಾರಣೆ ಜತೆ ಜತೆಯಾಗಿ ಹೋಗಬೇಕೆಂದು ಗಾಂಧೀಜಿ ಹೇಳಿದ್ದರು. ವಿಶ್ವ ಭ್ರಾತೃತ್ವ ಹಾಗೂ ಸಾಮಾಜಿಕ ಸಾಮ ರಸ್ಯಕ್ಕೆ ಆದ್ಯತೆ ನೀಡಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ವರ್ಗಗಳ ಜನರನ್ನು ಒಟ್ಟು ಸೇರಿಸಿ ನೇತೃತ್ವ ವಹಿಸಿದ್ದರು. ಗನ್‌ ಇಲ್ಲದೆ, ಬಾಂಬ್‌ ಸಿಡಿಸದೆ ಶಾಂತಿಯುತವಾಗಿ ಅಹಿಂಸಾತ್ಮಕ ಚಳವಳಿ ನಡೆಸಿ ಗೆಲುವು ಸಾಧಿಸಿದ ಮಹಾತ್ಮಾ ಗಾಂಧಿ ಅವರದು ಸಂತರಿಗೆ ಸಮಾನವಾದ ವ್ಯಕ್ತಿತ್ವ ಎಂದರು.

ಪಠ್ಯದಲ್ಲಿ ಗಾಂಧಿ ವಿಚಾರಧಾರೆ ಬೇಕು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯದಲ್ಲಿ ಗಾಂಧಿ ವಿಚಾರಧಾರೆ ಸೇರಿಸಬೇಕು. ಐಐಎಂನಂತಹ ಉನ್ನತ ಶಿಕ್ಷಣದಲ್ಲಿ ಗಾಂಧಿ ತತ್ತಗಳ ಬೋಧನೆ ಈಗಾಗಲೇ ಇದೆ. ಪದವಿ ತರಗತಿಗಳಲ್ಲಿಯೂ ಸೇರ್ಪಡೆ ಮಾಡಿದರೆ ಉತ್ತಮ ಎಂದರು.

ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂವಿಧಾನದ ಪ್ರಸ್ತಾವನೆ (ಪ್ರಿಯಾಂಬಲ್‌) ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಯಾವುದೇ ಪ್ರಚೋದನೆಗೆ ಒಳಗಾಗ ಬಾರದು. ಪೊಲೀಸರಿಗೆ ಇರುವ ಅಧಿಕಾರವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.

Advertisement

ಕಾಲೇಜಿನ ಪ್ರಾಂಶುಪಾಲ ವಂ| ಡಾ| ಪ್ರವೀಣ್‌ ಮಾರ್ಟಿಸ್‌ ಮಾತನಾಡಿ, ಗಾಂಧಿ ವಿಚಾರಧಾರೆ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೇ ಪ್ರಸ್ತುತ. ಆದರೆ ನಮ್ಮ ದೇಶದಲ್ಲಿ ಗಾಂಧಿಯ ಬಗ್ಗೆ ಮಾತನಾಡಲು ಭಯ ಪಡುವ ವಾತಾವರಣ ಇದೆ. ಕಾಲೇಜಿನಲ್ಲಿ ಸಂವಿಧಾನ ಸಪ್ತಾಹ ನಡೆಸಿ, ಸಂವಿಧಾನದ ಪುಸ್ತಕ ವಿತರಿಸಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂತ ಅಲೋ ಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ವಂ| ಡೈನೇಶಿಯಸ್‌ ವಾಸ್‌ ದೇಶದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದ್ದು, ಆರ್ಥಿಕ ಪರಿಸ್ಥಿತಿ ಕುಸಿದರೂ ಧ್ವನಿ ಎತ್ತುವುದಿಲ್ಲ. ಪ್ರಜಾ ಪ್ರಭುತ್ವವನ್ನು ಬಲ ಪಡಿಸುವ ಆವಶ್ಯಕತೆ ಇದೆ ಎಂದರು. ನೆಹರೂ ಚಿಂತನ ಕೇಂದ್ರದ ನಿರ್ದೇ ಶಕ ಪ್ರೊ| ರಾಜಾರಾಮ ತೋಳ್ಪಾಡಿ ಪ್ರಸ್ತಾವನೆ ಗೈದರು. ಕಾಲೇಜಿನ ಪೊಲಿಟಿಕಲ್‌ ಸೈನ್ಸ್‌ ವಿಭಾಗದ ಮುಖ್ಯಸ್ಥರಾದ ಡಾ| ರೋಸ್‌ ವೀರಾ ಡಿ’ಸೋಜಾ ಸ್ವಾಗತಿಸಿ ಡಾ| ದಿನೇಶ್‌ ನಾಯಕ್‌ ವಂದಿಸಿದರು.

ರಾಜಕೀಯ ನಾಯಕರು ಒಂದು ವಾರ ಮೌನ ಪಾಲಿಸಲಿ
ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಪ್ರೊ| ಬಿ.ಕೆ. ಚಂದ್ರಶೇಖರ್‌, ಇವತ್ತಿನ ಕಾಲದಲ್ಲಿ ಸೃಜನಾತ್ಮಕ ಚಿಂತನೆಗಳು ದಿವಾಳಿಯಾಗಿವೆ. ಬಿಜೆಪಿಯವರು ಒಂದು ಹೇಳಿದರೆ ಕಾಂಗ್ರೆಸಿಗರು ಇನ್ನೊಂದು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ಅಥವಾ ಬೇರೊಂದು ಪಕ್ಷದವರು ಇನ್ನೊಂದು ಹೇಳುತ್ತಾರೆ. ರಾಜಕೀಯ ನಾಯಕರು ಒಂದು ವಾರ ಏನನ್ನೂ ಹೇಳದೆ ಮೌನವಾಗಿದ್ದರೆ ಒಳ್ಳೆಯದು. ಒಬ್ಬೊಬ್ಬ ನಾಯಕರು ಒಂದೊಂದು ಕಮೆಂಟ್‌ ಮಾಡುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next