Advertisement

ರೈತರ ಬೇಡಿಕೆ ಈಡೇರಿಸಲು ಪ್ರಯತ್ನ: ಕಳಸದ

06:36 PM Sep 15, 2021 | Nagendra Trasi |

ಮುದ್ದೇಬಿಹಾಳ: ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡಿರುವ ಮುದ್ದೇಬಿಹಾಳ ತಾಲೂಕಿನ ಕೃಷ್ಣಾ ನದಿ ತೀರದ ರೈತರ ಬೇಡಿಕೆಗಳನ್ನು ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ ಹೇಳಿದರು.

Advertisement

ವೀರೇಶನಗರದ ವೀರೇಶ್ವರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಪುರ ಜಿಲ್ಲಾ ಕಚೇರಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಕುರಿತು ಪರಿಸರ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ, ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಬೃಹತ್‌ ನೀರಾವರಿ ಯೋಜನೆಯಿಂದ ಭೂಮಿ ಕಳೆದುಕೊಂಡು ಪುನರ್ವಸತಿ ಕೇಂದ್ರದಲ್ಲಿ ವಾಸವಾಗಿರುವ ಸಂತ್ರಸ್ತರ ಹಕ್ಕುಪತ್ರ ವಿತರಣೆ ಬೇಡಿಕೆ ನ್ಯಾಯಯುತವಾಗಿದೆ. ಪುನರ್ವಸತಿ ಗ್ರಾಮಗಳಲ್ಲಿ ಸಾಕಷ್ಟು ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಹಲವರು ಮನವಿ ಸಲ್ಲಿಸಿದ್ದಾರೆ. ಕ್ರೀಡಾಂಗಣ ಕೊರತೆ ಇರುವ ಬಗ್ಗೆಯೂ ಸಮನ ಸೆಳೆದಿದ್ದಾರೆ. ಎಲ್ಲ ಅಹವಾಲುಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಜಿಲ್ಲಾಡಳಿತ ವತಿಯಿಂದ ಪತ್ರ ಬರೆಯಲಾಗುತ್ತದೆ ಎಂದರು.

ಏತ ನೀರಾವರಿ ಯೋಜನೆ: ಕೆಬಿಜೆಎನ್ನೆಲ್‌ ನಿಂದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ವಿಸ್ತರಣೆ ನಡೆಯುತ್ತಿದೆ. ಈ ಯೋಜನೆಯು ಮುದ್ದೇಬಿಹಾಳ ತಾಲೂಕು, ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಸುರಪುರ ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂಥದ್ದಾಗಿದೆ. ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಕೃಷ್ಣಾ ನದಿಯಿಂದ 2.22 ಟಿಎಂಸಿ ನೀರನ್ನು ಎತ್ತಿ ಸುಮಾರು 25 ಹಳ್ಳಿಗಳ 17500 ಹೆಕ್ಟೇರ್‌ ಒಣ ಭೂಮಿಗೆ ನೀರಾವರಿ ಪದ್ಧತಿ ಮುಖಾಂತರ ನೀರೊದಗಿಸಲು ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆ ವಿಜಯಪುರ ಜಿಲ್ಲೆಗೂ ಸಂಬಂಧಿಸಿರುವುದರಿಂದ ಈ ಜಿಲ್ಲೆಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಯೋಜನೆಯ ಪರಿಸರ ಸಂಬಂಧಿತ ವಿಷಯಗಳ ಕುರಿತು ಸಾರ್ವಜನಿಕರ ಅಹವಾಲು ಆಲಿಸಲು ಈ ಸಭೆ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಯವರ ಪ್ರತಿನಿಧಿ ಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಯೋಜನೆಯ ಅನುಷ್ಠಾನ ಈಗಾಗಲೇ ಆರಂಭಗೊಂಡು ಮುಕ್ತಾಯ ಹಂತಕ್ಕೆ ತಲುಪಿದೆ. ಕೆಲವೇ ತಿಂಗಳಲ್ಲಿ ಯೋಜನೆ ಪ್ರಯೋಜನ ರೈತ ಫಲಾನುಭವಿಗಳಿಗೆ ದೊರೆಯಲಿದೆ ಎಂದರು.

Advertisement

ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಡಂಬಳ, ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ, ಕೆಬಿಜೆಎನ್ನೆಲ್‌ ನಾರಾಯಣಪುರ ಕಚೇರಿಯ ಕಾರ್ಯಪಾಲಕ ಅಭಿಯಂತರರಾದ ಎಸ್‌.ಎಚ್‌. ನಾಯ್ಕೋಡಿ, ಪ್ರಕಾಶ, ನಾಲತವಾಡ ಹೋಬಳಿ ಕಂದಾಯ ನಿರೀಕ್ಷಕ ಎನ್‌.ಬಿ. ದೊರೆ, ನಾಗಬೇನಾಳ ಪಿಡಿಒ ಅಯ್ಯಪ್ಪ ಮಲಗಲದಿನ್ನಿ, ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಜೂಲಗುಡ್ಡ ಸೇರಿದಂತೆಹಲವರು ಪಾಲ್ಗೊಂಡಿದ್ದರು. ಸಭೆಯ ಸಂಪೂರ್ಣ ಚಟುವಟಿಕೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾಗಿ ಚಿತ್ರೀಕರಿಸಿಕೊಳ್ಳಲಾಯಿತು. ಅಹವಾಲುಗಳನ್ನು ದಾಖಲಿಸಿಕೊಳ್ಳಲಾಯಿತು.

ಸಾರ್ವಜನಿಕರ ಬೇಡಿಕೆ
ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಪ್ರಮುಖರಾದ ಮುತ್ತು ಅಂಗಡಿ, ಸಂಗಣ್ಣ ಡಂಬಳ, ಶಿವು ಗೌಂಡಿ ಮೊದಲಾದವರು ಮಾತನಾಡಿ, ಕೃಷ್ಣಾ ನದಿಯಲ್ಲಿ ಮುಳುಗಡೆಯಾದ ಬಾಚಿಹಾಳ, ಸಿದ್ದಾಪುರ ಸೇರಿ ವೀರೇಶನಗರ ಪುನರ್ವಸತಿ ಗ್ರಾಮ ಸ್ಥಾಪಿಸಲಾಗಿದೆ. ಆದರೆ ಇದು ಹೆಸರಿಗೆ ಮಾತ್ರ ಪುನರ್ವಸತಿ ಗ್ರಾಮವಾಗಿದ್ದು ಸಾಕಷ್ಟು ಮೂಲ ಸೌಕರ್ಯಗಳ ಕೊರತೆಯನ್ನು ಇಲ್ಲಿ ವಾಸಿಸುವ ಜನರು ಅನುಭವಿಸುತ್ತಿದ್ದಾರೆ. ಸುಸಜ್ಜಿತ ರಸ್ತೆಗಳು, ಉತ್ತಮ ಕ್ರೀಡಾಂಗಣ, ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಲಭ್ಯವಾಗಿಲ್ಲ. ಈ ಭಾಗದಲ್ಲಿ ಆಲಮಟ್ಟಿ ಎಡದಂಡೆ ಕಾಲುವೆ ಪ್ರಯೋಜನ ಕಲ್ಪಿಸಿದ್ದರೂ ಇದುವರೆಗೂ ಹನಿ ನೀರೂ ಕಾಲುವೆಯಲ್ಲಿ ಹರಿದು ಬಂದಿಲ್ಲ. ಸರ್ಕಾರಿ ಶಾಲೆಗಳಿಗೆ ಅಗತ್ಯ ಪ್ರಮಾಣದ ಸುಸಜ್ಜಿತ ಕೊಠಡಿಗಳು ಇಲ್ಲ. 1970ರಲ್ಲಿ ಭೂಮಿ ಕಳೆದುಕೊಂಡು ಸಂತ್ರಸ್ತರಾದ ರೈತರಿಗೆ ಆಗ ಎಕರೆಗೆ ಕೇವಲ 500 ರೂ. ಪರಿಹಾರವನ್ನು ಬೇಕು ಬೇಡ ಎಂಬಂತೆ ವಿತರಿಸಿದ್ದಾರೆ.

ಇನ್ನೂ ಶೇ. 70 ಪರಿಹಾರವನ್ನು ಪ್ರಸಕ್ತ ಕಾಲಮಾನಕ್ಕನುಗುಣವಾಗಿ ವಿತರಿಸಿದಲ್ಲಿ ಸಂತ್ರಸ್ತ ರೈತರಿಗೆ ಹೆಚ್ಚು ಪ್ರಯೋಜನ ಆದಂತಾಗುತ್ತದೆ. ತಾಲೂಕಿನ ಪಕ್ಕದಲ್ಲೇ ಇರುವ ಆಲಮಟ್ಟಿ ಜಲಾಶಯದಲ್ಲಿ ಸಂತ್ರಸ್ತರಾದ ಪುನರ್ವಸತಿ ರೈತರ ಜಮೀನುಗಳಿಗೆ ಉತ್ತಮ ಪರಿಹಾರ ನೀಡಿದ್ದಾರೆ. ಈ ಭಾಗದವರಿಗೆ ಮಾತ್ರ ಮಲತಾಯಿ ಧೋರಣೆ ತೋರಿಸಿದ್ದು ಸರಿಯಾದ ನೀತಿ ಅಲ್ಲ. ನಮಗೆ ನಮ್ಮ ಮನೆಗಳ ಹಕ್ಕು ಪತ್ರ ನೀಡಿ ನಮ್ಮ ಭೂಮಿಗೆ ಸೂಕ್ತ ದರ ನಿಗದಿಪಡಿಸಿ ಹೆಚ್ಚುವರಿ ಪರಿಹಾರ ವಿತರಿಸಬೇಕು ಎಂದು ಬೇಡಿಕೆ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next