Advertisement

ಆಡುಮಲ್ಲೇಶ್ವರ ಪ್ರವಾಸಿ ತಾಣವಾಗಿಸಲು ಯತ್ನ

05:27 PM Jul 08, 2018 | |

ಚಿತ್ರದುರ್ಗ: ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಜೋಗಿಮಟ್ಟಿ ಅರಣ್ಯ ಪ್ರದೇಶ ವರದಾನವಾಗಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಹೊರವಲಯದ ಆಡುಮಲ್ಲೇಶ್ವರ ಕಿರು ಮೃಗಾಲಯ ಮತ್ತು ಬಾಲವನದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರು ಹಾಗೂ ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಕಿರು ಮೃಗಾಲಯದ ವಲಯ ಅರಣ್ಯಾಧಿ ಕಾರಿಗಳ ನವೀಕೃತ ಕಚೇರಿ ಉದ್ಘಾಟನೆ, ಚಿರತೆ ಆವರಣಕ್ಕೆ ಶಿಲಾನ್ಯಾಸ ಮತ್ತು ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಡುಮಲ್ಲೇಶ್ವರ ಕಿರು ಮೃಗಾಲಯ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ಆಗ ಮತ್ತಷ್ಟು ಕಾಡುಪ್ರಾಣಿಗಳು ಇಲ್ಲಿಗೆ ಬಂದು ಸೇರಲಿವೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿವೆ. ಆಡುಮಲ್ಲೇಶ್ವರ ಕಿರು ಮೃಗಾಲಯ ಅಭಿವೃದ್ಧಿಯಾದರೆ, ಸಮೀಪದಲ್ಲೇ ಇರುವ ತಿಮ್ಮಣ್ಣನಾಯಕನ ಕೆರೆಯ ಅಭಿವೃದ್ಧಿಯೂ ಆಗಬೇಕು. ಆಗ ಕೋಟೆ ಜತೆಗೆ ಈ ಎರಡು ಸ್ಥಳಗಳು ನೋಡಲು ಹೆಚ್ಚು ಆಕರ್ಷಿತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.

ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರಕ್ಕೆ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯ ಶನಿವಾರ ಮತ್ತು ಭಾನುವಾರ ಬಸ್‌ ಸಂಚಾರ ಇದ್ದು, ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ರಜೆ ದಿನಗಳು ಸೇರಿದಂತೆ ಇತರೆ ದಿನಗಳಲ್ಲೂ ಓಡಾಟ ಮಾಡಬೇಕು ಎಂದರು. 

ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ಮಲೆನಾಡಗಿಂತ ಸುಂದರ ಮತ್ತು ಆಕರ್ಷಣಿಯ ತಾಣವಾಗಿ ಆಡುಮಲ್ಲೇಶ್ವರ ಮತ್ತು ಜೋಗಿಮಟ್ಟಿ ಪ್ರದೇಶಗಳಿವೆ. ಇಂತಹ ಪ್ರದೇಶಗಳ ಸಂರಕ್ಷಣೆಗೆ ಅಧಿಕಾರಿಗಳು ಬದ್ಧವಾಗಿರಬೇಕು. ಚಿರತೆ, ಕರಡಿ ಸೇರಿದಂತೆ ಮತ್ತಿತರ ಕಾಡುಪ್ರಾಣಿಗಳು ಆಹಾರ ಹುಡುಕಿ ಜನವಸತಿ ಪ್ರದೇಶಗಳಿಗೆ ಬರುತ್ತಿದ್ದು ಜನರ ಮೇಲೆ ದಾಳಿ ಮಾಡುತ್ತಿವೆ. ಇದನ್ನು ತಡೆಯುವ ಕೆಲಸ ಮಾಡಬೇಕು. ಕಾಡಿನೊಳಗಿರುವ ಕಾಡುಪ್ರಾಣಿಗಳಿಗೆ ಕುಡಿಯಲು ನೀರು, ಆಹಾರದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

Advertisement

ಆಡುಮಲ್ಲೇಶ್ವರ, ಜೋಗಿಮಟ್ಟಿ ಪ್ರದೇಶಗಳು ಅಧ್ವಾನದಿಂದ ಕೂಡಿವೆ. ರಸ್ತೆ ಇಲ್ಲ, ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದು, ಜೋಗಿಮಟ್ಟಿ, ಆಡುಮಲ್ಲೇಶ್ವರ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಅನುದಾನ ನೀಡುವಂತೆ ಕೋರಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಕಾರಿ ಕೆ.ಬಿ. ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 9 ಮೃಗಾಲಯಗಳಿವೆ. ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ 9ನೇಯದಾಗಿದೆ.

1987ರಲ್ಲಿ ಇದನ್ನು ಆರಂಭಿಸಲಾಗಿತ್ತು. ಮುಂದಿನ ದಿನಗಳಲ್ಲಿ ಎರಡು ಹುಲಿ, ಚಿರತೆ, 25 ಹೊಸ ಪಕ್ಷಿಗಳ ಆಗಮನವಾಗಲಿದೆ. ಪ್ರತಿ ವರ್ಷ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಒಂದು ಲಕ್ಷ ಪ್ರವಾಸಿಗರು ಬಂದು ಹೋಗುತ್ತಿದ್ದು ಕನಿಷ್ಠ 3 ಲಕ್ಷದಷ್ಟಾದರೂ ಪ್ರವಾಸಿಗರು ಬಂದು ಹೋಗುವಂತೆ ಮಾಡಲಾಗುತ್ತದೆ. ಅದಕ್ಕೆ ಬೇಕಿರುವ ಎಲ್ಲ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಮೃಗಾಲಯವನ್ನು ಬನ್ನೇರುಘಟ್ಟ ಮೃಗಾಲಯ ದತ್ತು ಪಡೆದಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಕೆ.ಜಿ. ಮೂಡಲಗಿರಿಯಪ್ಪ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next