ಸಾಗರ: ಎಲ್ಲಾ ಹಂದಿಗೋಡು ಕಾಯಿಲೆ ಸಂತ್ರಸ್ತರ ಬವಣೆಗಳ ಕುರಿತು ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಿ ಅಗತ್ಯ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಸಾಗರ ಉಪ ವಿಭಾಗದ ಸಹಾಯಕ ಆಯುಕ್ತ ದರ್ಶನ್ ಭರವಸೆ ನೀಡಿದರು. ತಾಲೂಕಿನ ಹಂದಿಗೋಡು ಹಾಗೂ ಬಂದಗದ್ದೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿ, ಆಡಳಿತ ಜನಪರವಾಗಿ ಸಮಸ್ಯೆಯ ಪರಿಹಾರಕ್ಕೆ ಸಂಪೂರ್ಣ ಪ್ರಯತ್ನ ಮಾಡುತ್ತದೆ ಎಂದರು.
ಹಂದಿಗೋಡು ಕಾಯಿಲೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘದ ರಾಜೇಂದ್ರ ಬಂದಗದ್ದೆ ಮಾತನಾಡಿ, ಕಳೆದ 40 ವರ್ಷಗಳಿಂದ ಈ ಕಾಯಿಲೆ ಅಸ್ತಿತ್ವದಲ್ಲಿದ್ದು ಈವರೆಗೂ ಇದಕ್ಕೆ ಕಾರಣ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸಂತ್ರಸ್ತರು ಭವಿಷ್ಯದ ಬಗ್ಗೆ ದಿಕ್ಕೇ ತೋಚದಂತಾಗಿದ್ದಾರೆ.
ದೈಹಿಕ ಬೆಳವಣಿಗೆ ನಿಂತು ಕುಬ್ಜರಾಗಿರುವ ಅವರು ಮೊಣಕಾಲು ಹಾಗೂ ದೇಹದ ಇತರ ಕೀಲು, ಸಂದಿಗಳಲ್ಲಿ ಯಮಯಾತನೆಯ ನೋವು ಅನುಭವಿಸುತ್ತಿದ್ದಾರೆ. ಕೆಲವರು ಕುಳಿತುಕೊಳ್ಳಲು ಆಗದೆ ತೆವಳುವ ಸ್ಥಿತಿಗೆ ಬಂದಿದ್ದಾರೆ ಎಂದು ವಿವರಿಸಿದರು.
ನೋವು ತಡೆಯಲಾಗದೆ ಹೆಚ್ಚಿನ ಪ್ರಮಾಣದಲ್ಲಿ ನೋವು ನಿವಾರಕ ಗುಳಿಗೆ ಸೇವಿಸುತ್ತಿದ್ದಾರೆ. ಇದರಿಂದಾಗಿ ಹಲವರು ಅಂಗವೈಫಲ್ಯದಿಂದ ಮರಣಕ್ಕೆ ತುತ್ತಾಗಿದ್ದಾರೆ. ಮಲ ಮೂತ್ರ ವಿಸರ್ಜನೆಗೆ ಸಂತ್ರಸ್ತರು ಯಾತನೆ ಪಡುವಂತಾಗಿದೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ಕನಿಷ್ಠ ಮಾಸಿಕ 5 ಸಾವಿರ ರೂ. ಮಾಸಾಶನ ನೀಡಬೇಕು. ಸಂತ್ರಸ್ತರು ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡಬೇಕು. ಈಗಾಗಲೇ ಹಲವು ಸಂತ್ರಸ್ತರು ಸ್ವ-ಸಹಾಯ ಸಂಘಗಳಲ್ಲಿ ಹೇರಳ ಬಡ್ಡಿ ದರ ನೀಡಿ ಸಾಲ ಪಡೆದಿದ್ದು ಅದನ್ನು ತೀರಿಸಲಾಗದ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಸಾಲವನ್ನು ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಎಚ್.ಎಂ. ಚಂದ್ರಶೇಖರ್ ಹಂದಿಗೋಡು, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ನಾರಾಯಣ ಗೋಳಗೋಡು, ನಾರಾಯಣ ಅರಮನೆ ಕೇರಿ ಇದ್ದರು.