Advertisement

ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಯತ್ನ

12:34 PM Sep 18, 2017 | |

ವಿಜಯಪುರ: ದೇಶದ ವಾಸ್ತು ಶಿಲ್ಪಕ್ಕೆ ವಿಶ್ವಕರ್ಮ ಸಮುದಾಯ ನೀಡಿರುವ ಕೊಡುಗೆ ಅನುಪಮ. ಹೀಗಾಗಿ ವಿಶ್ವಕರ್ಮ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

Advertisement

ರವಿವಾರ ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಈಗಾಗಲೇ ವಿಶ್ವಕರ್ಮ ಅಭಿವೃದ್ಧಿ ನಿಗಮ ರಚಿಸಿದ್ದು ವಿಶ್ವಕರ್ಮ ಜನಾಂಗದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ 85 ಕೋಟಿ ರೂ. ಮೀಸಲಿರಿಸಿದೆ. ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಬೇಡಿಕೆ ಈಡೇರಿಸುವ ಕುರಿತು ಸಿಎಂ ಜೊತೆ ಮಾತುಕತೆ ನಡೆಸಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ಸಾರಿದ ಬಸವಣ್ಣನವರಂತೆ ವಿಶ್ವಕರ್ಮ ಸಮುದಾಯ ಅವರ ಆಶಯಗಳನ್ನು ಮೈಗೂಡಿಸಿಕೊಂಡಿದೆ. ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ವಾಸ್ತುಶಿಲ್ಪಕ್ಕೆ ರಂಗಕ್ಕೆ ನೀಡಿ ಕೊಡುಗೆ ಅನುಪಮ. ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಹಲವು ಸ್ಮಾರಕಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲು ವಿಶ್ವಕರ್ಮರ ಪ್ರತಿಫಲದ ಕೊಡುಗೆಯೇ ಕಾರಣವಾಗಿದೆ. ವಿಶ್ವಸಂಸ್ಥೆಯ ಯುನೆಸ್ಕೊ ಕೂಡ ಭಾರತದತ್ತ ತಿರುಗಿ ನೋಡುವಂತಾಗಿದೆ. ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಐತಿಹಾಸಿಕ ಪ್ರಸಿದ್ಧಿ ಪಡೆದ ದೇವಾಲಯ ಶ್ರೀಮಂತ ವಾಸ್ತುಶಿಲ್ಪ ಹೊಂದಲು ವಿಶ್ವಕರ್ಮರ ಸೇವೆ ಸ್ಮರಣಾರ್ಹವಾಗಿದೆ ಎಂದು ಬಣ್ಣಿಸಿದರು.

ವಿಶ್ವಕರ್ಮ ಜನಾಂಗವು ಇನ್ನಿತರ ಸಮಾಜಗಳೊಂದಿಗೆ ಸಹಬಾಳ್ವೆ, ಭಾಂದವ್ಯದಿಂದ ಜೀವನ ನಡೆಸುತ್ತಿದೆ. ಪರಿಶ್ರಮ ಜೀವಿಗಳಾಗಿರುವ ವಿರ್ಶಕರ್ಮರು ಶ್ರಮಯೋಗಿಗಳೆಂದೇ ಬನ್ನಿಸಿದ ಅವರು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು
ಕೂಡ ಹಿಂದುಳಿದ, ಅಲ್ಪಸಂಖ್ಯಾತರ, ದಲಿತರ, ವಿಶ್ವಕರ್ಮ ಸಮಾಜ ಸೇರಿದಂತೆ ಇಂತಹ ಹಲವು ಜನಾಂಗಕ್ಕೆ ಮಹತ್ವ ನೀಡಿ ನೆರವನ್ನು ಸಹ ಒದಗಿಸಿದ್ದಾರೆ. ದೇವಲೋಕ, ದ್ವಾರಕಾ, ಲಂಕಾ, ಹಸ್ತಿನಾಪುರವ, ಇಂದ್ರಪ್ರಸ್ಥಗಳಂತಹ ಪಟ್ಟಣಗಳನ್ನು ನಿರ್ಮಿಸಿರುವಂತಹ ವಿಶ್ವಕರ್ಮ ಸ್ಮರಣೆಗಾಗಿ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಟ್ಟಿರುವುದು ಎಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಬಾಲಕರ ಸರ್ಕಾರಿ ಪಪೂ ಕಾಲೇಜಿನ ಹಿರಿಯ ಉಪನ್ಯಾಸಕ ಸಂಗಮೇಶ ಬಡಿಗೇರ ಉಪನ್ಯಾಸ ನೀಡಿದರು.

Advertisement

ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಅಧ್ಯಕ್ಷತೆ, ಮಹೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಎಎಸ್ಪಿ ಶಿವಕುಮಾರ ಗುಣಾರೆ, ಉಪ ವಿಭಾಗಾಧಿಕಾರಿ ಶಂಕರ ವಣಿಕ್ಯಾಳ, ವಿಶ್ವಕರ್ಮ ನಿಗಮದ ಅಲ್ಲಮಪ್ರಭು ಪಂಚ್ಯಾಳ, ವಿಶ್ವಕರ್ಮ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಡಾ| ಡಿ.ಪಂಡಿತ ಇದ್ದರು.

ಇದೇ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ ಶಿರಸಂಗಿ ದೇವಸ್ಥಾನ ಟ್ರಸ್ಟ್‌ನ ವಿಕಾಸ ಪತ್ರಿಕೆ ಬಿಡುಗಡೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಮಹೇಶ ಪೋದ್ದಾರ ಸ್ವಾಗತಿಸಿದರು. ಡಿ.ದೇವರಾಜ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬಿ.ಜಿ. ಇಂಡಿ ವಂದಿಸಿದರು. ರವಿ ಕರಾಡೆ ನಾಡಗೀತೆ ಹಾಡಿದರು. ದೇವೇಂದ್ರ ಕುಮಾರ ಹಾಗೂ ತಂಡ ಪ್ರಾರ್ಥಿಸಿದರು.

ಇದಕ್ಕೂ ಮುನ್ನ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next