ಬೆಂಗಳೂರು: ರಾಜ್ಯಾದ್ಯಂತ ಗುತ್ತಿಗೆ ಆಧಾರದ ಮೇಲೆ ಕರ್ತವ್ಯನಿರ್ವಹಿಸುತ್ತಿರುವ ಆರು ಸಾವಿರ ಗ್ರಂಥಾಲಯ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ಮನವಿ ನೀಡಲು ಆಗಮಿಸಿದ ಗ್ರಂಥಾಲಯ ಮೇಲ್ವಿಚಾರಕರೊಬ್ಬರು “ಸರ್ಕಾರದ ವಿರುದ್ಧ ಡೆತ್‌ನೋಟ್’ ಬರೆದಿಟ್ಟು ವಿಧಾನಸೌಧದಲ್ಲಿ ಕುತ್ತಿಗೆ ಹಾಗೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ವಿಧಾನಸೌಧದ 3ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 332ರ ಶೌಚಾಲಯದಲ್ಲಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಅನೂರು ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಮೇಲ್ವಿಚಾರಕ ಆರ್. ರೇವಣ್ಣ ಕುಮಾರ್(48) ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೇವಣ್ಣ ಕುಮಾರ್ 20ಕ್ಕೂ ಅಧಿಕ ವರ್ಷಗಳಿಂದ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಸಿಬ್ಬಂದಿ, ಮೇಲ್ವಿಚಾರಕರನ್ನು ಖಾಯಂಗೊಳಿಸಿ, ಕನಿಷ್ಠ ವೇತನ ನಿಗದಿ ಮಾಡುವಂತೆ ನಾಲ್ಕೈದು ವರ್ಷಗಳಿಂದ ರಾಜ್ಯಪಾಲರು, ರಾಷ್ಟ್ರಪತಿ, ಪ್ರಧಾನಿ ಸೇರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಿಎಂ ಕಚೇರಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, ಕಚೇರಿ ಸಿಬ್ಬಂದಿ ಮನವಿ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ಬೇಸತ್ತ ಅವರು, ಸಮೀಪದಲ್ಲೇ ಇರುವ ಶೌಚಾಲಯಕ್ಕೆ ಹೋಗಿ, ಕೈ ಮತ್ತು ಕುತ್ತಿಗೆಯನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.