ತುಮಕೂರು: ನಗರದ ಜಯನಗರ ಠಾಣೆಯ ಪಿಎಸ್‌ಐ ನವೀನ್‌ಕುಮಾರ್ ಅವರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಬೆಂಗಳೂರಿನವರಾಗಿದ್ದು, ಹೊಸಗುಡ್ಡದಹಳ್ಳಿಯ ದಿಲೀಪ್ ಕುಮಾರ್(27), ಕಲಾಸಿಪಾಳ್ಯದ ಸಂತೋಷ್(23), ಕೆ.ಆರ್.ಮಾರುಕಟ್ಟೆಯ ವಿತ್ತೇಶ(21), ಮುರುಗನ್(24)ನನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಬಲೆ ಬೀಸಲಾಗಿದೆ.
ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಸೋಮವಾರ ರಾತ್ರಿ 11.40ರಲ್ಲಿ ಉಪ್ಪಾರಹಳ್ಳಿ ಅಂಡರ್‌ಪಾಸ್ ಹತ್ತಿರ ಇನ್ನೋವಾ ಕ್ರಿಸ್ಟಾ ಕಾರು ಅನುಮಾನವಾಗಿ ನಿಂತಿತ್ತು. ಇದನ್ನು ಕಂಡ ಪಿಎಸ್‌ಐ ನವೀನ್‌ಕುಮಾರ್, ಸಮೀಪದ ಹೋಗಿ, ವಿಚಾರಣೆ ಮಾಡುತ್ತಿದ್ದಾಗ ವಾಹನದ ಚಾಲಕ ಪಿಎಸ್‌ಐ ಅವರನ್ನು ಕೆಳಗೆ ತಳ್ಳಿ, ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿ, ಕಾರು ಸಮೇತ ಪರಾರಿಯಾಗಿದ್ದಾನೆ.
ಈ ವೇಳೆ ಕೆಳಗೆ ಬಿದ್ದಿದ್ದ ಸಬ್‌ಇನ್ಸ್‌ಪೆಕ್ಟರ್ ನವೀನ್ ಅವರ ಮುಖ, ಮೂಗು, ಕೈಗಳು ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದೆ. ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವು ಕಡೆ ಹೊಲಿಗೆ ಸಹ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಆಸ್ಪತ್ರೆಗೆ ದಾವಿಸಿ ಗಾಯಗೊಂಡಿದ್ದ ಸಬ್‌ಇನ್ಸ್‌ಪೆಕ್ಟರ್ ನವೀನ್ ಅವರ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಂಧನಕ್ಕೆ ತಂಡ ರಚನೆ: ಈ ಪ್ರಕರಣ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವಿ.ಜೆ ಶೋಭಾರಾಣಿ ಹಾಗೂ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ತಿಲಕ್ ಪಾರ್ಕ್ ವೃತ್ತ ನಿರೀಕ್ಷಕ ಟಿ.ಎಸ್.ರಾಧಾಕೃಷ್ಣ ಹಾಗೂ ಪಿಎಸ್‌ಐ ಎಂ.ಬಿ.ಲಕ್ಷ್ಮಯ್ಯ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚನೆ ಮಾಡಿದ್ದು, ಈ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.