Advertisement

Namma Metro: ಮೆಟ್ರೋ ಹಳಿ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನ

11:18 AM Sep 18, 2024 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಮಾರ್ಗದಲ್ಲಿ ರೈಲು ಬರುವ ವೇಳೆಯೇ ವ್ಯಕ್ತಿಯೊಬ್ಬ ಹಳಿಯ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮತ್ತೂಂದು ಘಟನೆ ಮಂಗಳವಾರ ಜ್ಞಾನಭಾರತಿ ನಿಲ್ದಾಣದಲ್ಲಿ ನಡೆದಿದೆ. ಇದರೊಂದಿಗೆ ಒಂದೇ ವರ್ಷದಲ್ಲಿ ಮೆಟ್ರೋ ಹಳಿ ಮೇಲೆ ಇಳಿದ 7ನೇ ಘಟನೆ ಇದಾಗಿದೆ!

Advertisement

ಕಳೆದ ತಿಂಗಳು ಅಂದರೆ ಆಗಸ್ಟ್‌ 3ರಂದು ಹಸಿರು ಮಾರ್ಗದಲ್ಲಿ ಬರುವ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈಲಿನ ಚಕ್ರದಲ್ಲಿ ಸಿಲುಕಿದ್ದ ವ್ಯಕ್ತಿಯ ಮೃತದೇಹ ನುಜ್ಜುಗುಜ್ಜಾಗಿತ್ತು. ಶವ ತೆಗೆಯಲು ಸಿಬ್ಬಂದಿ ಹರಸಾಹಸಪಟ್ಟಿದ್ದರು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ನೇರಳೆ ಮಾರ್ಗದಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆ ಯತ್ನ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬಿಹಾರ ಮೂಲದ ಸಿದ್ಧಾರ್ಥ್ (30) ಎಂಬಾತ ಮಂಗಳವಾರ ಮಧ್ಯಾಹ್ನ 2.13ರ ಸುಮಾರಿಗೆ ಹಳಿಗೆ ಹಾರಿದ್ದಾರೆ. ತಕ್ಷಣ ಸ್ಟೇಷನ್‌ ಕಂಟ್ರೋಲರ್‌ ಮತ್ತು ತಂಡವು ತುರ್ತು ಗುಂಡಿ ಒತ್ತಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಸಿದ್ಧಾರ್ಥ್ಗೆ ಯಾವುದೇ ಗಾಯಗಳು ಆಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಸುಮಾರು 20 ನಿಮಿಷಗಳ ಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದರ ಬಿಸಿ ತುಸು ಜೋರಾಗಿಯೇ ತಟ್ಟಿತು. ಮಧ್ಯಾಹ್ನ 2.30ಕ್ಕೆ ಸೇವೆ ಪುನಾರಂಭಗೊಂಡಿತು. ಈ ಮಧ್ಯೆ ಸೇವೆಯಲ್ಲಿ ವ್ಯತ್ಯಯ ಯಾಕೆ ಉಂಟಾಗಿದೆ ಎಂಬುದರ ಮಾಹಿತಿಯೂ ಜನರಿಗೆ ಇರಲಿಲ್ಲ. ಇದರಿಂದ ಪರದಾಡಿದರು.

Advertisement

ಈ ಅವಧಿ (ಮಧ್ಯಾಹ್ನ 2.13ರಿಂದ 2.31ರವರೆಗೆ)ಯಲ್ಲಿ ವೈಟ್‌ ಫೀಲ್ಡ್‌ನಿಂದ ಮೈಸೂರು ರಸ್ತೆವರೆಗೆ ಮಾತ್ರ ಮೆಟ್ರೋ ಸೇವೆಗಳು ಲಭ್ಯ ಇದ್ದವು. ಅಲ್ಲಿಂದ ಚಲ್ಲಘಟ್ಟ, ಕೆಂಗೇರಿ, ಜ್ಞಾನಭಾರತಿ ಸುತ್ತಮುತ್ತ ಹೋಗುವ ಜನ ನಿಲ್ದಾಣದಿಂದ ಇಳಿದು, ಬಸ್‌ ಅಥವಾ ಆಟೋಗಳನ್ನು ಹಿಡಿದು ನಿಗದಿತ ಸ್ಥಳ ತಲುಪಿದರು. ಇದರಿಂದ ಅವರೆಲ್ಲರಿಗೂ ಸಂಚಾರದಟ್ಟಣೆ ಬಿಸಿ ತಟ್ಟಿತು.

ಕೇವಲ 9 ತಿಂಗಳಲ್ಲಿ 7 ಘಟನೆಗಳು!:   

  1. 2024 ಜನವರಿಯಲ್ಲಿ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್‌ ಬಿತ್ತು ಎಂಬ ಕಾರಣಕ್ಕೆ ಮಹಿಳೆ ಸೀದಾ ಟ್ರ್ಯಾಕ್‌ಗೆ ಇಳಿದಿದ್ದರು. ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಳಿಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಮಹಿಳೆ ಅಪಾಯದಿಂದ ಪಾರಾಗಿದ್ದರು.
  2. ಜ.6ರಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕೇರಳ ಮೂಲದ ಯುವಕನೊಬ್ಬ ಹಳಿಗೆ ಜಿಗಿದು ಗಂಭೀರಗೊಂಡಿದ್ದ. ಇದರಿಂದ 45 ನಿಮಿಷ ರೈಲು ಸಂಚಾರ ಸ್ಥಗಿತವಾಗಿತ್ತು.
  3. ಫೆಬ್ರವರಿಯಲ್ಲಿ ಜೆ.ಪಿ. ನಗರ ನಿಲ್ದಾಣದ ಟ್ರ್ಯಾಕ್‌ನಲ್ಲಿ ಬೆಕ್ಕೊಂದು ಕಾಣಿಸಿಕೊಂಡಿದ್ದ ಕಾರಣ ರೈಲಿನ ಸಂಚಾರ ನಿಲ್ಲಿಸಲಾಗಿತ್ತು.
  4. ಮಾ.12ರಂದು ಜ್ಞಾನಭಾರತಿ ನಿಲ್ದಾಣದಿಂದ ಪಟ್ಟಣಗೆರೆ ನಿಲ್ದಾಣದವರೆಗೆ ಯುವಕನೊಬ್ಬ ಓಡಾಡಿದ್ದು ಕಂಡುಬಂದ ಕಾರಣ 20 ನಿಮಿಷ ರೈಲು ಸಂಚಾರ ನಿಂತಿತ್ತು.
  5. ಮಾ.22ರಂದು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲ್ವೆ ಹಳಿಗೆ ಜಿಗಿದು ಚಲಿಸುವ ರೈಲಿಗೆ ಸಿಲುಕಿ ಕಾನೂನು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.
  6. ಆ. 3ರಂದು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ವೇಳೆಯೇ ಕೋಣನಕುಂಟೆ ನಿವಾಸಿ ನವೀನ್‌ ಕುಮಾರ್‌ ಅರೋರಾ (57) ನಾಗಸಂದ್ರ ಕಡೆಯಿಂದ ಬರುತ್ತಿದ್ದ ವೇಳೆಯೇ ಪ್ಲ್ರಾಟ್‌ಫಾರಂನಿಂದ ಹಳಿಗೆ (ಟ್ರ್ಯಾಕ್‌) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
  7. ಸೆ. 17 (ಮಂಗಳವಾರ) ಜ್ಞಾನಭಾರತಿ ನಿಲ್ದಾಣದಲ್ಲಿ ಸಿದ್ಧಾರ್ಥ್ ಎಂಬಾತ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Advertisement

Udayavani is now on Telegram. Click here to join our channel and stay updated with the latest news.