Advertisement

ಪಂಚ ಪೀಠಾಧೀಶರ ಒಗ್ಗೂಡಿಸಲು ಯತ್ನ: ಶಾಮನೂರು

05:21 PM Sep 08, 2022 | Team Udayavani |

ದಾವಣಗೆರೆ: ಪಂಚಪೀಠಾಧೀಶರನ್ನು ಒಟ್ಟಿಗೆ ಸೇರಿಸಿ ದಾವಣಗೆರೆಯಲ್ಲಿ ಭವ್ಯ ಮೆರವಣಿಗೆ ಮಾಡುವ ಯೋಚನೆ ಇದೆ ಎಂದು ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

Advertisement

ನಗರದ ದಾವಣಗೆರೆ-ಹರಿಹರ ಅರ್ಬನ್‌ ಸಹಕಾರಿ ಸಮುದಾಯ ಭವನದಲ್ಲಿ ಮೂರುದಿನಗಳ ಕಾಲ ನಡೆದ ಶ್ರೀಶೆ„ಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ 36ನೇ ವಾರ್ಷಿಕ ಪುಣ್ಯಾರಾಧನೆ, ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯರ 11ನೇ ವಾರ್ಷಿಕ ಸ್ಮರಣೋತ್ಸವ, ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಪಂಚ ಪೀಠಾಧೀಶರ ಮೆರವಣಿಗೆ ಮಾಡುವ ಬಗ್ಗೆ ಎಲ್ಲ ಸ್ವಾಮೀಜಿಯವರೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದ ಅವರು, ಪೀಠಾಧೀಶರು ಆಗಾಗ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸಬೇಕು ಎಂದರು.

ಯಾವ ಸಂದರ್ಭದಲ್ಲಿ ಬರದೇ ಇದ್ದರೂ ರಾಜಕಾರಣಿಗಳು ಚುನಾವಣೆ ಬಂದಾಗ ಮಠಗಳಿಗೆ ಭೇಟಿ ನೀಡುತ್ತಾರೆ. ಆಗ ಸ್ವಾಮೀಜಿಯಾದವರು ಯಾರು ಬಂದರೂ ಅವರಿಗೆ “ನೀವೇ ಗೆಲ್ಲುತ್ತೀರಿ’ ಎಂದು ಆಶೀರ್ವಾದ ಮಾಡಿ ಕಳುಹಿಸುತ್ತಾರೆ. ಚುನಾವಣೆ ಬಂದಾಗ ಸ್ವಾಮೀಜಿಗಳು ರಾಜಕಾರಣಿ ಗಳನ್ನು ತಮ್ಮ ಹತ್ತಿರ ಬಿಟ್ಟು ಕೊಳ್ಳದೇ ಇರುವುದೇ ಒಳ್ಳೆಯದು ಎಂದರು.

ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲದ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಮಹಾಪೀಠದ ಡಾ| ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು. ಮಾಜಿ ಶಾಸಕ ಬಿ.ಪಿ. ಹರೀಶ್‌, ವರ್ತಕ ಬಿ.ಸಿ. ಶಿವಕುಮಾರ, ಪ್ರಮುಖರಾದ ಶಿವಯೋಗಿಸ್ವಾಮಿ, ಅಥಣಿ ವೀರಣ್ಣ, ಬಿ. ನಾಗೇಶಪ್ಪ. ಎ.ಎನ್‌. ಮುರುಗೇಶ ಇನ್ನಿತರರು ವೇದಿಕೆಯಲ್ಲಿದ್ದರು.

Advertisement

ಬೆಳಿಗ್ಗೆ ಜಗದ್ಗುರುಗಳಿಂದ ಪಂಚಾಚಾರ್ಯ ಮಂದಿರ ದ್ವಾರಬಾಗಿಲು ಉದ್ಘಾಟನೆ, ಶ್ರೀಶೈಲ ಲಿಂ. ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ರಜತಮೂರ್ತಿಗಳ ಮೆರವಣಿಗೆ ಮತ್ತು ಕಾಶಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ಪುರಪ್ರವೇಶದೊಂದಿಗೆ ಬೆಳ್ಳಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

ಬಿಎಸ್‌ವೈ ಜತೆ ಹೊಂದಾಣಿಕೆ ಇದೆ
ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬರಬೇಕಿತ್ತು. ಸಚಿವ ಉಮೇಶ ಕತ್ತಿ ನಿಧನರಾಗಿದ್ದರಿಂದಾಗಿ ಅವರು ಬಂದಿಲ್ಲ. ಅವರಿಗೂ, ನನಗೂ ಹೊಂದಾಣಿಕೆ ಇದೆ. ವೀರಶೈವ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆದಾಗ ಅದನ್ನು ತಡೆಯುವಲ್ಲಿ ವೀರಶೈವ ಮಹಾಸಭಾದ ಅಧ್ಯಕ್ಷನಾದ ನನಗೆ ಅವರು ಬೆಂಬಲ ನೀಡಿದ್ದರು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಮಠದ ಗೌರವ ಹೆಚ್ಚಿಸಿ
ಮಠದ ಗುರುಗಳ ಸ್ಥಾನಕ್ಕೆ ಚ್ಯುತಿ ಬರುತ್ತಿರುವ ಘಟನೆಗಳು ಹೆಚ್ಚು ಸಂಭವಿಸುತ್ತಿರುವ ಈ ಸಂದರ್ಭದಲ್ಲಿ ಜಗದ್ಗುರುಗಳು, ಸಮಾಜದ ಹಿರಿಯರು ಸೇರಿ ಈ ಕುರಿತು ಚರ್ಚಿಸಬೇಕು. ಮಠಗಳಲ್ಲಿನ ಅವ್ಯವಸ್ಥೆ ಸರಿಪಡಿಸಲು ಕ್ರಮವಹಿಸುವ ಮೂಲಕ ಮಠಗಳು ಹಾಗೂ ಗುರುಗಳ ಬಗ್ಗೆ ಜನರಲ್ಲಿ ಗೌರವ, ಭಕ್ತಿ ಭಾವನೆ ಕಡಿಮೆ ಆಗದಂತೆ ಮಾಡಬೇಕು ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌, ಸಭೆಯಲ್ಲಿದ್ದ ಶ್ರೀಗಳು ಹಾಗೂ ಹಿರಿಯರಲ್ಲಿ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next