Advertisement

ಮಹಿಳೆಯ ಬ್ಯಾಗ್ ಕಳವಿಗೆ ಯತ್ನ : ಜಾಗೃತಿಗಾಗಿ ಅಣಕು ಕಾರ್ಯಾಚರಣೆ : ಶಶಿಕುಮಾರ್ ಸ್ಪಷ್ಟನೆ

06:23 PM Sep 12, 2021 | Team Udayavani |

ಮಂಗಳೂರು : ಕಾರಿನಲ್ಲಿ ಬಂದ ತಂಡ ಮಹಿಳೆಯ ಬ್ಯಾಗ್‌ ಕಸಿದುಕೊಳ್ಳಲು ಪ್ರಯತ್ನಿಸುವ ಮತ್ತು ಆಗ ಮಹಿಳೆ ಪ್ರತಿರೋಧ ವ್ಯಕ್ತಪಡಿಸುವ ಅಣಕು ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸರು ನಡೆಸಿದ್ದು ಇದರ ವೀಡಿಯೋ ವೈರಲ್‌ ಆಗಿದೆ.

Advertisement

ರವಿವಾರ(ಸೆ.12) ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಮಂಗಳೂರು ನಗರದ ಸೈಂಟ್‌ ಆ್ಯಗ್ನೆಸ್‌ ಕಾಲೇಜು ಮುಂಭಾಗದಲ್ಲಿ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳ ಪೈಕಿ ಓರ್ವ ದುಷ್ಕರ್ಮಿಯು ಮಹಿಳೆಯನ್ನು ದೂಡಿ ಬ್ಯಾಗ್‌ ಕಸಿದುಕೊಳ್ಳಲು ಯತ್ನಿಸುತ್ತಾನೆ. ಮಹಿಳೆಯು ಪ್ರತಿಯಾಗಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿ ತನ್ನನ್ನು ರಕ್ಷಿಸಿಕೊಳ್ಳುತ್ತಾರೆ. ಈ ದೃಶ್ಯ ಸಿಸಿ ಕೆಮರಾ ಹಾಗೂ ಪೊಲೀಸರು ಅಳವಡಿಸಿದ ಕೆಮರಾದಲ್ಲಿ ದಾಖಲಾಗಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಾರ್ಯಾಚರಣೆ ಯಶಸ್ವಿ

ಅಣಕು ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಅವರು, ಕಾರ್ಯಾಚರಣೆ ಯಶಸ್ವಿಯಾಗಿದೆ. ಶೋಭಲತಾ ಕಟೀಲ್‌ ಅವರ ಸ್ವರಕ್ಷಾ ಫಾರ್‌ ವುಮೆನ್‌ ಟ್ರಸ್ಟ್‌ನ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು ಶೋಭಲತಾ ಅವರು ಪಾದಚಾರಿ ಮಹಿಳೆಯಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

“112 ತುರ್ತು ಸಹಾಯವಾಣಿ’ಗೆ ಕರೆ
ಘಟನೆ (ಅಣಕು ಕಾರ್ಯಾಚರಣೆ) ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರೋರ್ವರು 11.03 ಕ್ಕೆ “ತುರ್ತು ಸಹಾಯವಾಣಿ 112’ಗೆ( ಇಆರ್‌ಎಸ್‌ಎಸ್‌-112) ಕರೆ ಮಾಡಿದ್ದರು. 112 ರಕ್ಷಣಾ ವಾಹನ 11.08ಕ್ಕೆ ಸ್ಥಳಕ್ಕೆ ಆಗಮಿಸಿತ್ತು. ಕದ್ರಿ ಪೊಲೀಸ್‌ ಠಾಣೆಯ ನಿರೀಕ್ಷಕರು ಮತ್ತು ಸಿಬಂದಿ 11.18ಕ್ಕೆ ಆಗಮಿಸಿದ್ದರು. ಮೇಲಧಿಕಾರಿಗಳು ಕೂಡ ಭೇಟಿ ನೀಡಿದ್ದರು. ಮಾಹಿತಿ ಪಡೆದ ಪೊಲೀಸ್‌ ಕಂಟ್ರೋಲ್‌ ರೂಮ್‌ನವರು ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಅಲರ್ಟ್‌ ಮಾಡಿ ಸಂಶಯಾಸ್ಪದ ವಾಹನ ಪತ್ತೆ ಹಚ್ಚಿದ್ದಾರೆ.

Advertisement

ಸಾರ್ವಜನಿಕರಿಂದ ವಾಹನ ತಡೆಯುವ ಯತ್ನ
ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ಹಾಗೂ ಆ್ಯಗ್ನೆಸ್‌ ಕಾಲೇಜು ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಮತ್ತು ಪುರುಷ ಪಾದಚಾರಿಯವರು ಅಣಕು ದುಷ್ಕರ್ಮಿಗಳಿದ್ದ ವಾಹನ ತಡೆಯುವ, ಗುರುತು ಹಚ್ಚುವ ಹಾಗೂ ಕಾರನ್ನು ಹಿಂಬಾಲಿಸುವ ಪ್ರಯತ್ನ ಮಾಡಿದ್ದು ಇದು ಅಭಿನಂದನಾರ್ಹ. ಅಲ್ಲದೆ ಸಾರ್ವಜನಿಕರು 2 ಬೈಕ್‌ ಹಾಗೂ 1 ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಯ ಚಹರೆ ಮತ್ತು ವಾಹನದ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅದರಂತೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ದಷ್ಕರ್ಮಿಗಳ ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಂಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕಾರು ಅಡ್ಡ ಇಡಲು ಯತ್ನ ಸಾರ್ವಜನಿಕರೋರ್ವರು ದುಷ್ಕರ್ಮಿಗಳ ಕಾರಿಗೆ ಅವರ ಕಾರನ್ನು ಅಡ್ಡಲಾಗಿ ನಿಲ್ಲಿಸಲು ಯತ್ನಿಸಿರುವುದು ಕೂಡ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಅಭಿನಂದಿಸಲಾಗುವುದು. ಸಾರ್ವಜನಿಕರ ಸ್ಪಂದನೆ ಉತ್ತಮವಾಗಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.

ಜಾಗೃತಿಗಾಗಿ ಅಣಕು ಕಾರ್ಯಾಚರಣೆ : 
ದರೋಡೆ, ಸುಲಿಗೆಯಂತಹ ಸಂದರ್ಭದಲ್ಲಿ ಸಾರ್ವಜನಿಕರು, ಸಂತ್ರಸ್ತೆ, ಪೊಲೀಸರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಪುನರಾವಲೋಕನಕ್ಕಾಗಿ ಈ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಈ ರೀತಿಯ ನೈಜ ಘಟನೆಗಳು ನಡೆದರೆ ಸಾರ್ವಜನಿಕರು ಕೂಡ ತತ್‌ಕ್ಷಣ ಸ್ಪಂದಿಸಬೇಕು ಎಂಬ ಸಂದೇಶವನ್ನು ಈ ಅಣಕು ಕಾರ್ಯಾಚರಣೆ ಮೂಲಕ ನೀಡುವ ಪ್ರಯತ್ನ ನಡೆಸಿದ್ದೇವೆ. ಈ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ಮಹಿಳೆಯರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದ್ದು ಮಹಿಳೆಯರು, ಹಿರಿಯ ನಾಗರಿಕರು ಸಾರ್ವಜನಿಕವಾಗಿ ಓಡಾಡುವಾಗ ಜಾಗರೂಕರಾಗಿರಬೇಕು.
-ಎನ್‌.ಶಶಿಕುಮಾರ್‌,
ಪೊಲೀಸ್‌ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next