Advertisement
ಶಿಶಿರ್ ದೇವಾಡಿಗ ಮತ್ತು ಸುಶಾನ್ ಎಲ್. ಬಂಧಿತರು. ಪೊಲೀಸ್ ತಂಡಕ್ಕೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೋಷನಗರ ಎಂಬಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ಅಡ್ಡ ಹಾಕಿ ತಪಾಸಣೆ ನಡೆಸಿದಾಗ, 132 ಗ್ರಾಂ ತೂಕದ ಮೆಥಾಂಫಿತಮೈನ್ ಮತ್ತು 250 ಎಲ್ ಎಸ್ ಡಿ ಸ್ಟ್ಯಾಂಪ್ ಡ್ರಗ್ ಪತ್ತೆಯಾಗಿದೆ. ಆರೋಪಿಗಳಿಂದ 3,70,050 ರೂ. ನಗದು ಹಾಗೂ ಸಾಗಾಟಕ್ಕೆ ಬಳಸಲಾದ ಸ್ವಿಫ್ಟ್ ಕಾರು ರೂ.1,031,000 ಆಗಿದ್ದು, ಒಟ್ಟು ರೂ.14,01,050 ಬೆಲೆಬಾಳುವ ಸೊತ್ತುಗಳನ್ನು ಆರೋಪಿಗಳ ಸಮೇತ ವಶಪಡಿಸಿಕೊಳ್ಳಲಾಗಿದೆ. ಸ್ವರಕ್ಷಣೆಗೆ ಆರೋಪಿಗಳು ಉಪಯೋಗಿಸುತ್ತಿದ್ದ ಎರಡು ಚಾಕು ಹಾಗೂ ಎರಡು ಲಾಂಗುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಶಾನ್ ವಿರುದ್ಧ ನಾಲ್ಕು ಪ್ರಕರಣಗಳಿದ್ದು, ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರ ಭವನಕ್ಕೆ ಕಲ್ಲು ಹೊಡೆದ ಪ್ರಕರಣ, ಕೊಲೆಯತ್ನ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಪ್ರಕರಣಗಳಿವೆ. ಶಿಶಿರ್ ವಿರುದ್ಧ ಮೂರು ಪ್ರಕರಣಗಳಿದ್ದು, ಕಾರ್ಕಳ ಹಾಗೂ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ಹಾಗೂ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳಿವೆ. ಇಬ್ಬರು ಹೆಚ್ಚಾಗಿ ಬೆಂಗಳೂರಿನಲ್ಲೇ ಇದ್ದುಕೊಂಡು ಕಾರ್ಯಾಚರಿಸುತ್ತಿದ್ದರು. ಸಹಾಯಕ ಪೊಲೀಸ್ ಆಯುಕ್ತೆ ಧನ್ಯ. ಎನ್ . ನಾಯಕ್, ಪಿ.ಎಸ್ಐ ಪುನೀತ್ ಗಾಂವ್ಕರ್, ಉಳ್ಳಾಲ ಠಾಣಾ ಪಿಎಸ್ ಐ ಸಂತೋಷ್ ಕುಮಾರ್ ಡಿ ಹಾಗೂ ಸಿಬ್ಬಂದಿ ಶಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್ ಯಡ್ರಾಮಿ ಭಾಗವಹಿಸಿದ್ದರು.