ಬೆಂಗಳೂರು: ನಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ನಮ್ಮ ವಿರುದ್ಧ 18 ಮಂದಿ ಅವಿಶ್ವಾಸ ನಿರ್ಣಯ ಮಂಡನೆಗೆ ಪತ್ರ ನೀಡಿದ್ದು ಇದರ ಹಿಂದೆ ಕೆಲ ಕಾಣದ ಶಕ್ತಿಗಳು ನಮ್ಮ ಪಿತೂರಿ ನಡೆಸುತ್ತಿವೆ, ಇದನ್ನು ಪತ್ತೆ ಹೆಚ್ಚಬೇಕಿದೆ. ಯಾರ ವಿರುದ್ದವೂ ನಾವು ಆರೋಪ ಮಾಡುವುದಿಲ್ಲ ಎಂದು ಒಕ್ಕಲಿಗ ಸಂಘದ ಹಾಲಿ ಅಧ್ಯಕ್ಷ, ಶಾಸಕ ಬಾಲಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರದರ್ಶಕವಾಗಿ ನಮ್ಮ ಆಡಳಿತ ಮಂಡಳಿ ಆಡಳಿತ ನಡೆಸುತ್ತಿದೆ. ಈ ಕುರಿತಂತೆ ನಾವು ಬಹಿರಂಗವಾಗಿ ಚರ್ಚೆ ನಡೆಸಲು ಸಿದ್ದರಿದ್ದೇವೆ. ನಮ್ಮ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ 18 ಜನರಲ್ಲಿ 12 ಮಂದಿ ಮಾತ್ರ ಖುದ್ದು ಹಾಜರಿದ್ದು ಕಾರ್ಯದರ್ಶಿಗೆ ಪತ್ರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಯಾರ ಕೈವಾಡವಿದೆ ಎಂಬುದು ಗೊತ್ತಾಗಲಿದೆ. ಶ್ರೀಗಂಧ ಕಾವಲು ಸಂಘದ ಆಸ್ತಿಯಾಗಿದ್ದು, ಅದನ್ನು ಸಂಘವನ್ನು ಉಳಿಸಲು ಎಲ್ಲ ಪ್ರಯತ್ನ ನಡೆಸಲಾಗುವುದು. ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನು ಕಬಳಿಸುವ ಪ್ರಯತ್ನ ನಡೆಸಲಾಗುತ್ತದೆ. ಇದನ್ನ ಸಹಿಸದ ಕೆಲವರು ನಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗ ಸಮುದಾಯಕ್ಕೆ ಈಗಾಗಲೇ ನೀಡಿರುವ ಶೇ4ರಷ್ಟು ಮೀಸಲಾತಿಯನ್ನು ಶೇ 12ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಆರ್ಥಿಕವಾಗಿ ಹಿಂದುಳಿದ ಒಕ್ಕಲಿಗ ಸಮುದಾಯದಯದವರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಶೇ 12ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಐದಾರು ವರ್ಷದಲ್ಲಿ ಕ್ರೋಡಿಕೃತ ವೇತನದಲ್ಲಿ ಕಾರ್ಯನಿರ್ವಹಿಸುತ್ತಾ ಅತಂತ್ರ ಸ್ಥಿತಿಯಲ್ಲಿದ್ದ ಸುಮಾರು 456 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಖಾಯಮಾತಿ ಆದೇಶ ಜಾರಿ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 8 ಕೋಟಿ ರೂಪಾಯಿ ಬಿಡುಗಡೆ ಗೊಳಿಸಲಾಗಿದೆ. ಒಟ್ಟಾರೆ ಸಂಘದಲ್ಲಿ ಪಾರದರ್ಶಕ ಆಡಳಿತವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.