Advertisement

ಗಾಂಧೀಜಿ ಕಟ್ಟಿಸಿದ ಬಾವಿ ಪುನರ್‌ನವೀಕರಣಕ್ಕೆ ಪ್ರಯತ್ನ

06:18 AM Jan 05, 2019 | |

ಪುತ್ತೂರು : ಕಾಲನಿ ಜನರ ಬಗ್ಗೆ ಮಹಾತ್ಮಾ ಗಾಂಧೀಜಿ ಅವರಿಗಿದ್ದ ಕಾಳಜಿಯ ಪರಿಣಾಮ ಪುತ್ತೂರಿನ ರಾಗಿಕುಮೇರಿನಲ್ಲಿ ಬಾವಿಯನ್ನು ಕೊರೆಸ ಲಾಗಿತ್ತು. ಕಾಲಕ್ರಮೇಣ ಈ ಬಾವಿ ಅನಾಥವಾಗಿದ್ದು, ಇದೀಗ ಮತ್ತೊಮ್ಮೆ ಗಾಂಧೀಜಿಯ ನೆನಪಿಗಾಗಿ ಈ ಬಾವಿ ಯನ್ನು ನವೀಕರಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

Advertisement

ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ರಾಗಿಕುಮೇರು ಬಾವಿಯನ್ನು ಶುಕ್ರವಾರ ವೀಕ್ಷಿಸಿದರು. ಮುಂದೆ ಜಾಗ ಯಾರ ಹೆಸರಿನಲ್ಲಿದೆ ಮತ್ತು ಇದನ್ನು ಅನುಸರಿಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆಲೋಚಿಸಲಿದ್ದಾರೆ.

ಪುತ್ತೂರು- ಬಲ್ನಾಡು ರಸ್ತೆಯಲ್ಲಿ ಬೈಪಾಸ್‌ ರಸ್ತೆಯನ್ನು ತುಂಡರಿಸಿ ಮುಂದೆ ಸಾಗಿದಾಗ ಬಪ್ಪಳಿಗೆ ಎಂಬಲ್ಲಿ ಅಂಬಿಕಾ ವಿದ್ಯಾಸಂಸ್ಥೆಯ ರಸ್ತೆ ಎದುರಾಗುತ್ತದೆ. ಇದೇ ರಸ್ತೆಯ ಎಡಬದಿಯಲ್ಲಿ ಮುಖ್ಯರಸ್ತೆಗೆ ಕಾಣುವಂತೆ ಈ ಬಾವಿ ಇದೆ. ಸಮೀಪದಲ್ಲೇ ಗದ್ದೆಗಳಿದ್ದ ಕಾರಣ ಬಾವಿ ಹೆಚ್ಚು ಆಳವಾಗಿ ಕೊರೆಸಿದಂತಿಲ್ಲ. ಇದೀಗ ಗದ್ದೆಗಳು ತೋಟಗಳಾಗಿವೆ. ಆಸುಪಾಸಿನಲ್ಲಿ ಬೋರ್‌ ವೆಲ್‌ಗ‌ಳು ತಲೆ ಎತ್ತಿವೆ. ಕಾಲನಿ ನಿವಾಸಿಗಳಿಗೆ ನಗರಸಭೆಯ ನೀರು ಪೂರೈಕೆ ಆಗುತ್ತಿವೆ. ಹೀಗೆಲ್ಲ ಇರುವಾಗ ಮಹಾತ್ಮಾ ಗಾಂಧೀಜಿ ಕೊರೆಸಿದ ಬಾವಿ ನಿಷ್ಪ್ರಯೋಜಕ ಆದದ್ದು ವಿಶೇಷವೇನಲ್ಲ.

ಪುತ್ತೂರು ಪೇಟೆ ನಡುವೆ ಅಶ್ವತ್ಥ ಕಟ್ಟೆಯೊಂದಿದೆ. ಮಹಾತ್ಮಾ ಗಾಂಧೀಜಿ ಇದರಲ್ಲಿ ಕುಳಿತು ಭಾಷಣ ಮಾಡಿದ್ದರು. ಈ ಕಟ್ಟೆಯನ್ನು ಉಳಿಸಬೇಕು ಹಾಗೂ ಕಟ್ಟೆ ಬೇಕಾಗಿಲ್ಲ ಎಂಬ ವಾದ- ವಿವಾದ ನಡೆಯುತ್ತಿದೆ. ಇದರ ನಡುವೆ ಗಾಂಧೀಜಿ ಮುತುವರ್ಜಿಯಲ್ಲಿ ನಿರ್ಮಿಸಿದ ಬಾವಿ ಯಾರ ಗಮನಕ್ಕೂ ಬಂದೇ ಇರಲಿಲ್ಲ. ಮರೆಯಾಗುತ್ತಿರುವ ಬಾವಿ – ಕೆರೆಗಳ ನಡುವೆ ಒಂದು ಬಾವಿಯನ್ನು ಉಳಿಸಿದ ಪುಣ್ಯದ ಕಾರ್ಯಕ್ಕೆ ಸಹಾಯಕ ಆಯುಕ್ತರು ಮುಂದಾಗಿರುವುದು ಶ್ಲಾಘನೀಯ. ಇದು ಪೂರ್ಣರೂಪದಲ್ಲಿ ನಿರ್ಮಾಣವಾದರೆ, 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಧೀಜಿ ಅವರಿಗೆ ನೀಡಿದ ಕೊಡುಗೆ ಇದೆಂದೂ ಪರಿಗಣಿಸಬಹುದು. ಸಹಾಯಕ ಆಯುಕ್ತರ ಜತೆಗೆ ಕಂದಾಯ ನಿರೀಕ್ಷಕ ದಯಾನಂದ್‌, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಎಂಜಿನಿಯರ್‌ ದಿವಾಕರ್‌, ವಸಂತ್‌ ಭೇಟಿ ನೀಡಿದರು.

ಯಾಕಾಗಿ ನಿರ್ಮಾಣ?
ರಾಗಿಕುಮೇರಿನಲ್ಲಿ ಬಾವಿ ಕೊರೆಸಲು ಮಹಾತ್ಮಾ ಗಾಂಧೀಜಿ ಸೂಚನೆ ನೀಡಿದ್ದರು. ಆದರೆ ಇದನ್ನು ನಿರ್ಮಿಸಿದವರು ಡಾ| ಶಿವರಾಮ ಕಾರಂತ, ಸದಾಶಿವ ರಾವ್‌, ಸುಂದರ ರಾವ್‌ ಅವರು. 1934ರ ಮಾರ್ಚ್‌ ನಲ್ಲಿ ಗಾಂಧೀಜಿ ಪುತ್ತೂರಿಗೆ ಬಂದಾಗ ಮೊದಲಿಗೆ ಭೇಟಿ ಕೊಟ್ಟದ್ದು ರಾಗಿಕುಮೇರು ಕಾಲನಿಗೆ. ಆಗ ಅಲ್ಲಿನ ನಿವಾಸಿಗಳು ತೋಡಿನ ನೀರನ್ನು ಕುಡಿಯಲು ಬಳಸುತ್ತಿ ದ್ದರು. ಇದನ್ನು ನೋಡಿ ಬೇಸರಗೊಂಡ ಗಾಂಧೀಜಿ, ನಿಮ್ಮೂರಿನ ಜನರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಜತೆಗಿದ್ದ ಶಿವರಾಮ ಕಾರಂತ, ಸದಾಶಿವ ರಾವ್‌, ಸುಂದರ ರಾವ್‌ ಅವರನ್ನು ತರಾಟೆಗೆತ್ತಿಕೊಂಡಿದ್ದರು. ಅಲ್ಲದೇ, ಈ ಪ್ರದೇಶದಲ್ಲಿ ಒಂದು ಬಾವಿ ನಿರ್ಮಿಸಲು ಸೂಚನೆ ನೀಡಿದರು. ಅದರಂತೆ ಬಾವಿ ನಿರ್ಮಿಸಲಾಯಿತು. ಪಕ್ಕದಲ್ಲೇ ಇರುವ ರಾಗಿಕುಮೇರು ಶಾಲೆಯನ್ನು ಕೂಡ ಗಾಂಧೀಜಿ ಸೂಚನೆಯಂತೆ ಕಾಲನಿ ನಿವಾಸಿಗಳಿಗಾಗಿ ನಿರ್ಮಿಸಲಾಗಿತ್ತು. ಎಂಬ ಮಾಹಿತಿ ಇದೆ.

Advertisement

ಡಿಸಿಗೆ ಪ್ರಸ್ತಾವನೆ
ನಗರಸಭೆಯ ಕಾಮಗಾರಿಗಳಲ್ಲಿ ಇದನ್ನು ಸೇರಿಸಿಕೊಳ್ಳಬಹುದು. ಡಿಸಿಗೆ ಪ್ರಸ್ತಾವನೆ ಕಳುಹಿಸುವಾಗ ಇದನ್ನು ಸೇರಿಸಿಕೊಳ್ಳಬಹುದು. ಅದಕ್ಕೆ ಜಾಗದ ಮಾಲೀಕರ ಜತೆ ಮಾತುಕತೆ ನಡೆಸಬೇಕು. ಅವರೇ ಬಾವಿಯನ್ನು ಅಭಿವೃದ್ಧಿ ಪಡಿಸಿದರೆ ಉತ್ತಮ. ಅಥವಾ ಜಾಗವನ್ನು ನಗರಸಭೆಗೆ ನೀಡಿದರೆ, ಅಭಿವೃದ್ಧಿ ಮಾಡಬಹುದು.
– ರೂಪಾ ಶೆಟ್ಟಿ,
ಪೌರಾಯುಕ್ತೆ, ನಗರಸಭೆ

ಉಳಿಸುವ ಪ್ರಯತ್ನ
ಮಹಾತ್ಮಾ ಗಾಂಧೀಜಿ ಸೂಚನೆಯಂತೆ ಕಾಲನಿ ನಿವಾಸಿಗಳಿಗಾಗಿ ಬಾವಿ ನಿರ್ಮಿಸಲಾಗಿದ್ದು, ಇದನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ. ಬಾವಿಗೆ ರಿಂಗ್‌ ಹಾಕಿ, ಇನ್ನಷ್ಟು ಆಳ ಮಾಡಬೇಕು. ಸುತ್ತಲಿನ ಪರಿಸರವನ್ನು ಶುಚಿತ್ವವಾಗಿಟ್ಟು, ಅಭಿವೃದ್ಧಿ ಪಡಿಸಬೇಕು ಎಂಬ ಆಲೋಚನೆ ಇದೆ.
– ಎಚ್.ಕೆ. ಕೃಷ್ಣಮೂರ್ತಿ,
 ಸಹಾಯಕ ಆಯುಕ್ತ, ಪುತ್ತೂರು

ಎಸಿ ನೇತೃತ್ವ
ಇತ್ತೀಚೆಗೆ ತಾ| ಪತ್ರಕರ್ತರ ಸಂಘದ ವತಿಯಿಂದ ಗಾಂಧಿ ಸ್ಮೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಾಂಧೀಜಿ ಸೂಚನೆಯಂತೆ ನಿರ್ಮಿಸಿದ ಬಾವಿ ಅನಾಥ ಆಗಿರುವುದರ ಬಗ್ಗೆ ಗಮನ ಸೆಳೆಯಲಾಗಿತ್ತು. ತಕ್ಷಣ ಪ್ರತಿಕ್ರಿಯಿಸಿದ ಎಸಿ  ಎಚ್.ಕೆ. ಕೃಷ್ಣಮೂರ್ತಿ ಅವರು ಪರಿಶೀಲಿಸಿ, ಅಭಿವೃದ್ಧಿ ಪಡಿಸುವ ಬಗ್ಗೆ ಭರವಸೆ ನೀಡಿದ್ದರು. ಈಡೇರಿಸುವಲ್ಲಿ ಕ್ರಮ ಜರುಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next