Advertisement

ಅನುದಾನಕ್ಕೆ ಆಗ್ರಹಿಸಿ ಎಚ್‌ಕೆಆರ್‌ಡಿಬಿಗೆ ಬೀಗ ಹಾಕಲು ಯತ್ನ

02:44 PM Mar 26, 2017 | Team Udayavani |

ಕಲಬುರಗಿ: ಹೈಕ ವ್ಯಾಪ್ತಿಯ ಖಾಸಗಿ ಶಾಲಾ, ಕಾಲೇಜುಗಳಿಗೆ ವೇತನುದಾನ ಮತ್ತು ಮೂಲಭೂತ ಸೌಕರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ಶನಿವಾರ ಹೈಕದ ಆರು ಜಿಲ್ಲೆಯ ಶಾಲಾ ಮಂಡಳಿ ಸದಸ್ಯರು ಎಚ್‌ಕೆಆರ್‌ಡಿಬಿ ಕಚೇರಿಗೆ ಬೀಗ ಜಡಿಯಲು ಯತ್ನಿಸಿದರು.

Advertisement

ಆಗ ಪೊಲೀಸರು ಈ ಪ್ರಯತ್ನಕ್ಕೆ ತಡೆಯೊಡ್ಡಿದರು. ಈ ವೇಳೆ ಆಕ್ರೋಶಗೊಂಡ ಸದಸ್ಯರು, ಕಚೇರಿಯ ಮುಂಭಾಗದಲ್ಲಿಯೇ ಎರಡು ಗಂಟೆಗಳ ಕಾಲ ಧರಣಿ ನಡೆಸಿದರು. ಸರಕಾರದ ನಿರ್ಲಕ್ಷ ಖಂಡಿಸಿ ವಿವಿಧ ಘೋಷಣೆ ಕೂಗಿದರು. ಪ್ರತಿಭಟನೆ ವೇಳೆ ಮಂಡಳಿ ಅಧಿಕಾರಿ ಮುಖೇನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ 371(ಜೆ)ನೇ ಕಲಂನಡಿ 5 ರಿಂದ 50 ಲಕ್ಷ ರೂ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು. ಹೈದ್ರಾಬಾದ ಕರ್ನಾಟಕ ವಿಶೇಷ ಕೋಶ ಸರ್ಕಾರದ ಜಂಟಿ ಕಾರ್ಯದರ್ಶಿ ಕೆ.ಎಲ್‌. ಲೋಕನಾಥ ಈ ಕುರಿತು ಆದೇಶ ನೀಡಿದ್ದರೂ, ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಈಗಾಗಲೇ ಅನೇಕ ಬಾರಿ ಬೇಡಿಕೆಗಳ ಕುರಿತು ಮನವರಿಕೆ ಮಾಡಿದರೂ ಸ್ಪಂದಿಸಿಲ್ಲ. 

ಕೊನೆಯ ಹಂತವಾಗಿ ಇತ್ತೀಚೆಗೆ ಬೆಂಗಳೂರಿಗೆ ನಿಯೋಗ ತೆರಳಿ 371(ಜೆ) ಅನುಷ್ಠಾನ ಸಮಿತಿಯ ಅಧ್ಯಕ್ಷರಿಗೆ, ಹೈದ್ರಾಬಾದ ಕರ್ನಾಟಕ ಭಾಗದ ಸಚಿವರಿಗೆ, ಶಾಸಕರಿಗೆ ಹಾಗೂ ವಿಶೇಷ ಕೋಶದ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.

ಇದಕ್ಕೂ ಸ್ಪಂದಿಸದೇ ಇದ್ದುದರಿಂದ ಹೋರಾಟ ಅನಿವಾರ್ಯವಾಯಿತು ಎಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಹೇಳಿದರು. ಅನುದಾನ ರಹಿತ ಶಾಲಾ, ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ಬಿಸಿಯೂಟ, ಸಮವಸ್ತ್ರ, ಸೈಕಲ್‌, ಬೂಟ್‌, ಸಾಕ್ಸ್‌ ಮುಂತಾದವುಗಳನ್ನು ಒದಗಿಸುವಂತೆ, 

Advertisement

ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಪರಿಶಿಷ್ಟರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತೆ, ಶೈಕ್ಷಣಿಕ ಉದ್ದೇಶಕ್ಕಾಗಿ ಬಳಕೆಯಾಗುವ ಭೂಮಿಯನ್ನು ಉಚಿತವಾಗಿ ನೋಂದಣಿ ಮಾಡುವಂತೆ ಹಾಗೂ ಉಚಿತವಾಗಿ ಎನ್‌ಎ ಮಾಡುವಂತೆ ಅವರು ಒತ್ತಾಯಿಸಿದರು. 

ಹೋರಾಟದ ಸ್ಥಳಕ್ಕೆ ಆಗಮಿಸಿದ ಮಂಡಳಿಯ ಮಹಿಳಾ ಅಧಿಧಿಕಾರಿ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಲಿಖೀತ ಭರವಸೆ ನೀಡಲು ಪ್ರತಿಭಟನೆಕಾರರು  ಒತ್ತಾಯಿಸಿದಾಗ, ಅಧಿಧಿಕಾರಿಗಳು ಒಂದು ದಿನ ಕಾಲಾವಕಾಶ ಕೊಡಿ, ಲಿಖೀತವಾಗಿ ಭರವಸೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ನಂತರ ಹೋರಾಟವನ್ನು ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ನಿತಿನ್‌ ಕೋಸಗಿ, ನಾಗಲಿಂಗಯ್ಯ ಮಠಪತಿ, ಚನ್ನವೀರಪ್ಪ ಸಲಗರ, ಬಸವರಾಜ ಹಡಪದ, ಶಾಂತಯ್ಯ ಹಿರೇಮಠ, ರಾಚಪ್ಪ ರೂಳೆ, ಚಂದ್ರಹಾಸ್‌, ಶಿವನಗೌಡ ಪಾಟೀಲ್‌, ಡಾ| ಪರಮೇಶ್ವರ ಬನಸೋಡೆ ಮುಂತಾದವರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next