ದಾವಣಗೆರೆ: ಜಿಲ್ಲೆಯ 24 ಸಾವಿರ ಜನರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ದಿಶಾ ಸಮಿತಿ ಕಾರ್ಯೋನ್ಮುಖವಾಗಲಿದೆ ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸದಸ್ಯ ಎಚ್.ಕೆ. ಬಸವರಾಜ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 42,870 ಜನ ವಸತಿರಹಿತರಲ್ಲಿ 24 ಸಾವಿರ ಜನಕ್ಕೆ ನಿವೇಶನವಿಲ್ಲ. ಈ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ದಿಶಾ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿಸೆಂಬರ್ ತಿಂಗಳಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ಈಗಾಗಲೇ 36 ಎಕರೆ ಜಮೀನು ಗುರುತಿಲಾಗಿದೆ. ಇನ್ನೂ 187 ಎಕರೆ ಜಾಗ ಗುರುತಿಸಬೇಕಿದೆ. ಅರ್ಹರಿಗೆ ಲಾಭ ಸಿಕ್ಕಿದೆಯೇ ಅಥವಾ ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲವಿದೆಯೇ ಎಂಬುದನ್ನು ಸಮಿತಿ ಪರಿಶೀಲಿಸುತ್ತದೆ. ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲಗಳು ಇದ್ದಲ್ಲಿ ಸಮಿತಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕುಂದುಕೊರತೆ ನಿವಾರಣೆಗಾಗಿ ಕಚೇರಿ ಆರಂಭಿಸಲಾಗಿದೆ. ಸಾರ್ವಜನಿಕರು ಯಾವುದೇ ತೊಂದರೆಗಳು ಇದ್ದಲ್ಲಿ ನಂ. 3946,ಯಥಾರ್ತ, ಬಾಪೂಜಿ ಗೆಸ್ಟ್ ಹೌಸ್ ಪಕ್ಕ, ಶಾಮನೂರು ರಸ್ತೆ, (ಮೊ:94494-00920) ಇಲ್ಲಿಗೆ ಸಂಪರ್ಕಿಸಬಹುದು ಎಂದರು.
ಸಮಿತಿ ಸದಸ್ಯರಾದ ಜಿ.ಪಿ. ಮುಪ್ಪಣ್ಣ, ಜಿ. ಚಂದ್ರೇಗೌಡ, ಎಚ್.ಎಂ. ಆಶಾ ದೇವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.