ಕಲಬುರಗಿ: ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣವನ್ನು ತೆಗೆದುಕೊಳ್ಳಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದ್ರಾಬಾದ ಕರ್ನಾಟಕ ಭಾಗದ ನಾಗರಿಕರು ಕಲಬುರಗಿ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ದೂರದ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಇನ್ನಿತರ ಭಾಗಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆ ಮಾಡಿದಲ್ಲಿ ಕಲಬುರಗಿ ಜನರ ಗಗನ ಹಾರಾಟದ ಕನಸು ನನಸಾಗುತ್ತದೆ ಎಂದರು.
ರಾಜ್ಯ ಸರ್ಕಾರವೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿರುವ ಯೋಜನೆ ಇದಾಗಿದೆ. ಮುಖ್ಯವಾಗಿ ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಗೊಂಡಲ್ಲಿ ವಿಮಾನಯಾನ ಸಾರಿಗೆ ಮತ್ತು ಈ ಭಾಗದ ಅಭಿವೃದ್ಧಿಗೆ ಮತ್ತೂಂದು ಮೈಲಿಗಲ್ಲು ಆಗಲಿದೆ. ಹೀಗಾಗಿ ಹೈದ್ರಾಬಾದ್ ನ ಏಶಿಯಾ ಪೆಸಿಫಿಕ್ ಪ್ಲೈಟ್ ಟ್ರೇನಿಂಗ್ ಸೆಂಟರ್ ಅಕಾಡೆಮಿಯಿಂದ ರವಿವಾರ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
2008ರಲ್ಲಿ ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿದ್ದು, ಆರಂಭಿಕ ಹಂತದಲ್ಲಿ ಪಿಪಿಪಿ ಯೋಜನೆಯಡಿ ಹೈದ್ರಾಬಾದ್‌ನ ಸತ್ಯಂ ಕಂಪನಿಯ ಅಂಗ ಸಂಸ್ಥೆಯಾದ ಮೇಟಾಸ್ ಸಂಸ್ಥೆಗೆ ವಿಮಾನ ನಿಲ್ದಾಣ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಸತ್ಯಂ ಹಗರಣ ಬಯಲಿಗೆ ಬಂದ ನಂತರ ಈ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ರದ್ದುಪಡಿಸಿ, 2010ರಲ್ಲಿ ರಾಹಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ರಾಹಿ ಸಂಸ್ಥೆಯ ನಿಧಾನಗತಿ ಕಾಮಗಾರಿಯಿಂದ ರಾಜ್ಯ ಸರ್ಕಾರ ಈ ಸಂಸ್ಥೆಯಿಂದ ಯೋಜನೆಯನ್ನು ಹಿಂಪಡೆದು ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ತಾಂತ್ರಿಕವಾಗಿ ಅನುಮೋದನೆ ಪಡೆದು ಉಳಿದ ಕಾಮಗಾರಿ ಪೂರ್ಣಗೊಳಿಸಲು 2015ರಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಿತು. ಪ್ರಸ್ತುತ 175.57 ಕೋಟಿ ಪರಿಷ್ಕೃತ ಅಂದಾಜು ಮೊತ್ತದ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿಮಾನಯಾನ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ. ಇನ್ನುಳಿದ ಕಾಮಗಾರಿಗಳು ಈ ವರ್ಷಾಂತ್ಯಕ್ಕೆ ಮುಗಿಯಲಿವೆ ಎಂದು ವಿವರಿಸಿದರು.
742 ಎಕರೆ ಬೃಹತ್ ಪ್ರದೇಶ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲಘು ವಿಮಾನಗಳು ಸೇರಿದಂತೆ ಏರ್‌ಬಸ್-320 ಸಹ ಭೂಸ್ಪರ್ಶ ಮಾಡುವಂತೆ 3.725 ಕಿ.ಮೀ. ಉದ್ದದ ರನ್‌ವೇ ಸಿದ್ಧಪಡಿಸಲಾಗಿದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನಯಾನ ಸೇವೆಗೆ ಸಂಬಂಧಪಟ್ಟಂತೆ ಕಾರ್ಯಚಟುವಟಿಕೆಗಳು ನಿರಂತರ ಸಾಗಲು ಏಶಿಯಾ ಪೆಸಿಫಿಕ್ ಪ್ಲೈಟ್ ಟ್ರೇನಿಂಗ್ ಸ್ಕೂಲ್ ಮತ್ತು ಎವಿಕಾನ್ ಟ್ರೇನಿಂಗ್ ಇನ್ಸ್‌ಟಿಟ್ಯೂಟ್ ಪ್ಲೈಯಿಂಗ್ ಸ್ಕೂಲ್ ಆರಂಭಿಸಲು
ಪ್ರಸ್ತಾವನೆ ಬಂದಿದ್ದು, ನಾಗರಿಕ ವಿಮಾನಯಾನ ಪ್ರಾಧಿಕಾರದ ಅನುಮತಿ ಪಡೆದು ತರಬೇತಿ ಶಾಲೆ ಪ್ರಾರಂಭಿಸಲಾಗುವುದು.
ಇದಲ್ಲದೆ ಪ್ಲೈಟ್ ಅಟೆಂಡರ್‌ಗಳಿಗೆ ತರಬೇತಿ ನೀಡಲು ಮತ್ತು ಕೌಶಲ್ಯ ತರಬೇತಿಗಾಗಿ ಏವಿಯೆಷನ್ ಸ್ಕಿಲ್ ಟ್ರೇನಿಂಗ್ ಸಂಸ್ಥೆಯಿಂದ ಶಾಲೆ ಪ್ರಾರಂಭಿಸಲು ಆರಂಭಿಕ ಹಂತದ ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿದರು. ವಾಣಿಜ್ಯ ಕಾರ್ಯಾಚರಣೆಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿದ್ದು,ಪ್ಲೈಯಿಂಗ್ ಲೈಸೆನ್ಸ್ ಪಡೆಯವುದು ಸರ್ಕಾರದ ಪ್ರಥಮಾದ್ಯತೆ ಆಗಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಫೈಯಿಂಗ್ ಲೈಸೆನ್ಸ್ ದೊರೆತ ನಂತರ ಖಾಸಗಿ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ ಜೆಟ್ ಹಾಗೂ
ಇನ್ನಿತರ ಸಂಸ್ಥೆಯ ವಿಮಾನಗಳು ಇಲ್ಲಿಂದ ಹಾರಾಡಲು ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.