ಹುಬ್ಬಳ್ಳಿ: ಪಾಲಿಕೆ ಒಡೆತನದ ಹಳೆಹುಬ್ಬಳ್ಳಿ ಆಸ್ಪತ್ರೆಯನ್ನು ಬೇರೆಡೆ ಸ್ಥಳಾಂತರಿಸಿ ಭೂಮಿಪೂಜೆ ಮಾಡುವುದಾಗಿ ಶಾಸಕ ಪ್ರಸಾದ ಅಬ್ಬಯ್ಯ ಹೇಳಿರುವುದು ಹಾಗೂ ಪಾಲಿಕೆ ಮತ್ತು ಮಹಾಪೌರರನ್ನು ಹೈಜಾಕ್ ಮಾಡಲು ಹೊರಟಿರುವುದು ಖಂಡನೀಯ.
ಆ ಮೂಲಕ ಶಾಸಕರು ಮಹಾಪೌರ, ಪಾಲಿಕೆಗೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮಾಪಣೆ ಕೇಳಬೇಕೆಂದು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಪಾಲಿಕೆಯು ಅವಳಿ ನಗರದಲ್ಲಿ ತನ್ನ ಒಡೆತನದಲ್ಲಿರುವ 9 ಆಸ್ಪತ್ರೆಗಳನ್ನು ಕಳೆದ 6-7ದಶಕಗಳಿಂದ ನಿರ್ವಹಣೆ ಮಾಡಿಕೊಂಡು ಬರುತ್ತಿದೆ.
ಆಸ್ಪತ್ರೆಗೆ ಸಿಬ್ಬಂದಿ ನೇಮಕ, ವೇತನವನ್ನು ನೀಡುತ್ತ ಬಂದಿದೆ. ಹಳೇಹುಬ್ಬಳ್ಳಿ ಆಸ್ಪತ್ರೆಯನ್ನು 1955ರಿಂದ ನಿರ್ವಹಣೆ ಮಾಡುತ್ತ ನೂರಾರು ಕೋಟಿ ವ್ಯಯಿಸಿದೆ. ಆಸ್ಪತ್ರೆಗಳ ಸ್ಥಳಾಂತರ, ಇನ್ನಿತರೆ ಕಾರ್ಯ ಕುರಿತು ಪಾಲಿಕೆಯೇ ನಿರ್ಧರಿಸುತ್ತದೆ. ಆದರೆ ಶಾಸಕರು ಹಳೇಹುಬ್ಬಳ್ಳಿ ಆಸ್ಪತ್ರೆಯನ್ನು ನೆಲಸಮ ಮಾಡಿ ಹೊಸ ಆಸ್ಪತ್ರೆ ನಿರ್ಮಿಸುತ್ತೇನೆ.
ಇನ್ನು 10-15 ದಿನಗಳಲ್ಲಿ ಸ್ಥಳಾಂತರಿಸುತ್ತೇನೆ. ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರ ಮುಖಾಂತರ ಭೂಮಿಪೂಜೆ ಮಾಡಿಸುತ್ತೇನೆಂದು ಉಡಾಫೆಯಾಗಿ ಹೇಳುವ ಮೂಲಕ ಪಾಲಿಕೆಯ ಆಡಳಿತ, ಮಹಾಪೌರ, ಉಪ ಮಹಾಪೌರ, ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷರನ್ನು ಸಂಪೂರ್ಣ ಕಡೆಗಣಿಸಿ,
ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಪಾಲಿಕೆಯನ್ನು ಹೈಜಾಕ್ ಮಾಡಲು ಹೊರಟಿದ್ದಾರೆ ಎಂದು ಕುಟುಕಿದರು. ಸರಕಾರದಿಂದ ಪಾಲಿಕೆಗೆ ಅನುದಾನ ಬರುತ್ತದೆಯೇ ಹೊರತು ನೇರವಾಗಿ ಶಾಸಕರ ನಿಧಿಗೆ ಆ ಹಣ ಬರುವುದಿಲ್ಲವೆಂಬುದನ್ನು ಶಾಸಕರು ಅರಿತುಕೊಳ್ಳಬೇಕು.
ಸರಕಾರದ ಒಡೆತನದ ಆಸ್ತಿಗಳ ಭೂಮಿಪೂಜೆ ಮಾಡುವ ಅಧಿಕಾರವನ್ನು ಶಾಸಕರು ಹೊಂದಿದ್ದಾರೆ. ಆದರೆ ಪಾಲಿಕೆ ಒಡೆತನದ ಆಸ್ತಿಯ ಭೂಮಿಪೂಜೆ ಮಾಡಬೇಕಾದರೆ ಪಾಲಿಕೆಯ ಅನುಮತಿ ಅವಶ್ಯವೆಂಬದನ್ನು ಇನ್ನಾದರೂ ಅವರು ತಿಳಿದುಕೊಳ್ಳಲಿ.
ಇನ್ನಾದರು ಜನರ ಕಣ್ಣಿಗೆ ಮಂಕುಬೂದಿ ಎರಚುವುದನ್ನು ಅವರು ನಿಲ್ಲಿಸಲಿ ಎಂದರು. ಅವಳಿ ನಗರದ ರಸ್ತೆಗಳು ಹದಗೆಡಲು ಜಿಲ್ಲಾ ಉಸ್ತುವಾರಿ ಸಚಿವರೇ ಪ್ರಮುಖ ಕಾರಣವೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಗಣೇಶ ಅಮರಾವತಿ, ಕಿಟ್ಟು ಬಿಜವಾಡ, ಅಣ್ಣಪ್ಪ ಗೋಕಾಕ ಇದ್ದರು.