Advertisement

ಕಾಡಾದಿಂದ ಸೌಲಭ್ಯ ಕಲ್ಪಿಸಲು ಯತ್ನ

05:51 PM Jan 12, 2021 | Adarsha |

ಶಿವಮೊಗ್ಗ: ಕಾಡಾದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತುಂಗಾ-ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.

Advertisement

ಸೋಮವಾರ ಪತ್ರಿಕಾ ಭವನದಲ್ಲಿ ಪ್ರಸ್‌ ಟ್ರಸ್ಟ್‌ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕಾಡಾ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗಾಗಿ ಮುಖ್ಯಮಂತ್ರಿಗಳಿಗೆ 400 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಮನವಿ ಪರಿಶೀಲಿಸಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಕೋವಿಡ್‌ನಿಂದಾಗಿ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬುದು ತಿಳಿದಿದೆ. ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಲೇ ಬರಲಾಗಿದೆ. ಈಗ ಅನುದಾನಕ್ಕೂ ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದರು.

ನಾಲೆಗಳಲ್ಲಿ ನೀರು ಪೋಲಾಗದಂತೆ ಡ್ರಿಪ್‌ ಮೂಲಕ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಗೊಂದಿ ನಾಲೆ ಬಳಿ ಪ್ರವಾಸೋದ್ಯಮ ತಾಣ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರದಿಂದ ಸಿಗುವ ಅನುದಾನ ದುರ್ಬಳಕೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪದ್ಧತಿಗೆ ಆದ್ಯತೆ ಕೊಡಲಾಗುವುದು. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗುವುದು. ಶೇ.80ರಷ್ಟು ನೀರು, ತೋಟಗಾರಿಕೆ ಬೆಳೆಗಳಿಗೆ ಬಳಕೆಯಾಗುತ್ತಿದೆ. ಭತ್ತ ಬೆಳೆಯುವ ರೈತ ಸಂಕಷ್ಟದಲ್ಲಿದ್ದಾನೆ. ಹಾಗಾಗಿ ಆಹಾರದ ಬೆಳೆಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು.

ಇದನ್ನೂ ಓದಿ:ಅಕಾಲಿಕ ಮಳೆ: ಭತ್ತದ ಫಸಲು ನಾಶ

Advertisement

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 40 ಕೋಟಿ ವೆಚ್ಚದ ಕಾಮಗಾರಿಗೆ ರೈತರಿಂದ ಅರ್ಜಿಗಳು ಬಂದಿವೆ. ಆದರೆ ಹಣಕಾಸಿನ ಕೊರತೆ ಇದೆ. ಇದನ್ನು ಸರಿದೂಗಿಸುವ ಸಲುವಾಗಿ ಜಿಪಂ ಸಿಇಒ ಅವರಿಗೆ ಮನವಿ ಮಾಡಲಾಗಿದ್ದು, ಕಾಡಾ ವ್ಯಾಪ್ತಿಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿಯಲ್ಲಿ ಕೆಲಸ ಮಾಡಲು 15-20 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಇದರಿಂದ ಒಂದಿಷ್ಟು ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ರೈತರಿಗೆ ಸೌಲಭ್ಯ ನೀಡಲು ಕಾಡಾ ಬದ್ಧವಾಗಿದ್ದು ಯಾವುದೇ ರೈತರು ಸೌಲಭ್ಯ ಕೇಳಿದರೂ ಪ್ರಾಮಾಣಿಕವಾಗಿ ಅದನ್ನು ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಭದ್ರಾ ನಾಲೆ ಆಧುನೀಕರಣ ಕೂಡ ಸಮರ್ಪಕವಾಗಿಲ್ಲ. ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಪ್ರಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ, ಪ್ರಧಾನ ಕಾರ್ಯದರ್ಶಿ ನಾಗರಾಜ್‌ ನೇರಿಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next