Advertisement

ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ ಮುಚ್ಚಿಹಾಕಲು ಪ್ರಯತ್ನ: ಕೋಟ ಶ್ರೀನಿವಾಸ ಪೂಜಾರಿ

01:36 PM Jul 28, 2023 | Team Udayavani |

ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ಮೊಬೈಲ್ ಮೂಲಕ ಚಿತ್ರೀಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತು ಜಿಲ್ಲಾಡಳಿತದ ಕೈಯನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಕಟ್ಟಿಹಾಕಿದೆ. ಇದನ್ನು ಮುಚ್ಚಿ ಹಾಕಲು ಸರಕಾರ ಮುಂದಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದರ ಸಿಐಡಿ ತನಿಖೆ ಅಥವಾ ಡಿಐಜಿ ಮಟ್ಟದ ಮಹಿಳಾ ಪೊಲೀಸ್ ಅಧಿಕಾರಿಯಿಂದ ತನಿಖೆ ಮಾಡಬೇಕಿತ್ತು. ಆದರೆ, ಇದನ್ನು ಮುಚ್ಚಿಹಾಕುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು. ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬಹಳ ದಿನಗಳ ಕಾಲ ಜನರನ್ನು ವಂಚಿಸಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸಿಐಡಿಗೆ ಕೊಟ್ಟು ಕೂಲಂಕಷ ತನಿಖೆ ಮಾಡಿಸಿ. ಇದರ ಆರೋಪಿತರ ಸಮಗ್ರ ತನಿಖೆ ನಡೆಸಬೇಕು. ಇದರ ಹಿಂದೆ ಇರುವ ಜಾಲ, ಭಯೋತ್ಪಾದನೆ ತಂಡದ ಸಾಧ್ಯತೆ ಅಥವಾ ಲವ್ ಜಿಹಾದ್ ಪ್ರಕರಣದ ಸಾಧ್ಯತೆ ಕುರಿತು ಪರಿಶೀಲಿಸಬೇಕಿದೆ ಎಂದು ಆಗ್ರಹಿಸಿದರು.

ಪ್ರತ್ಯೇಕ ಸಿಐಡಿ ತಂಡ ರಚಿಸಿ ತನಿಖೆಗೆ ಆದೇಶ ಕೊಡಬೇಕು. ಆದರೆ, ಇದರ ಬದಲಾಗಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು, ಯುವಕರ ಮೇಲೆ ಕೇಸು ಹಾಕುವ ಕೆಟ್ಟ ಪರಂಪರೆಗೆ ನಮ್ಮ ಗೃಹ ಇಲಾಖೆ ಹೊರಟಿದೆ. ಇದು ಎಲ್ಲಿಗೆ ಮುಟ್ಟಲಿದೆ ಎಂಬ ಆತಂಕ ಮೂಡಿದೆ ಎಂದು ತಿಳಿಸಿದರು. ಇಲ್ಲವೇ ತನಿಖೆಯನ್ನು ಎನ್‍ಐಗೆ ವಹಿಸಿ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಇದನ್ನೂ ಓದಿ:ಒಗ್ಗಟ್ಟಿನಲ್ಲಿ ಬಲವಿದೆ… ಮನೆಯೊಳಗೆ ನುಗ್ಗಿದ ಚಿರತೆಯನ್ನೇ ಓಡಿಸಿದ ಶ್ವಾನಗಳು

ಉಡುಪಿಯ ಖಾಸಗಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ಶೌಚಾಲಯದಲ್ಲಿ ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದ ಹೇಯ ಘಟನೆ ಇಡೀ ರಾಜ್ಯ ಮತ್ತು ದೇಶದ ನಾಗರಿಕರು ತಲೆತಗ್ಗಿಸುವಂಥದ್ದು ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲಿನ ವಿದ್ಯಾರ್ಥಿನಿಯರು ಬಹಿರಂಗವಾಗಿ ಮಾಧ್ಯಮದ ಮೂಲಕ ಹೇಳಿಕೆ ಕೊಡುತ್ತಿದ್ದಾರೆ ಎಂದರು.

Advertisement

ಇಂಥ ಘಟನೆಗಳು ಆರೇಳು ತಿಂಗಳುಗಳಿಂದ ನಡೆಯುತ್ತಿದ್ದು, ನಾವು ಆತಂಕದಿಂದಿದ್ದೇವೆ. ಮುಂದಿನ ದಿನಗಳಲ್ಲಿ ಎಂಥ ಚಿತ್ರಗಳು ಹೊರಬರಬಹುದೆಂಬ ಭೀತಿ, ಆತಂಕ ನಮಗಿದೆ ಅನ್ನುವ ಮಾತುಗಳನ್ನು ವಿದ್ಯಾರ್ಥಿನಿಯರು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ವಿವರಿಸಿದರು.

ಘಟನೆ ನಡೆದು ನಾಲ್ಕೈದು ದಿನಗಳವರೆಗೆ ಎಫ್‍ಐಆರ್ ದಾಖಲಿಸದೆ ಇರುವುದು ದುರದೃಷ್ಟಕರ. ವಿದ್ಯಾರ್ಥಿನಿಯರು ಬೀದಿಗೆ ಬಂದು ಪ್ರತಿಭಟಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ ಎಂದು ನುಡಿದರು.

ಮೊಬೈಲ್‍ ಗಳನ್ನು ಯಾರೋ ಒಯ್ದು ಬದಲಿಸಿ ಕೊಡುತ್ತಿದ್ದರು ಎಂಬ ಮಾಹಿತಿಯನ್ನೂ ವಿದ್ಯಾರ್ಥಿನಿಯರು ನೀಡಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪೊಲೀಸ್ ವರಿಷ್ಠರ, ಜಿಲ್ಲಾಡಳಿತದ ಕೈಯನ್ನು ಕಟ್ಟಿ ಹಾಕಿದ ಸಂಶಯ ಮೂಡುತ್ತದೆ ಎಂದರು. ನಾಗರಿಕ ಸಮಾಜ ತಲೆತಗ್ಗಿಸುವ ಮತ್ತು ಕೆಟ್ಟ ಪರಂಪರೆಯ ಆರೋಪ ಇದಾಗಿದ್ದು, ತಕ್ಷಣ ಇದರ ಉನ್ನತ ಮಟ್ಟದ ತನಿಖೆ ಮಾಡಬೇಕಲ್ಲವೇ ಎಂದು ಅವರು ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next