Advertisement

ದಂಡ ಸಮೇತ ಹಣ ವಾಪಾಸ್‌ಗೆ ಪ್ರಯತ್ನಿಸಿ

10:34 AM Apr 14, 2018 | Team Udayavani |

ಮಹಾನಗರ: ಬ್ಯಾಂಕ್‌ಗಳ ಎಟಿಎಂಗಳಿಂದ ಹಣ ಡ್ರಾ ಮಾಡಲು ಮುಂದಾದಾಗ ಕೆಲವೊಮ್ಮೆ ತಾಂತ್ರಿಕ ತೊಂದರೆಗಳಿಂದಾಗಿ, ಹಣ ಕೈಗೆ ಬರದೆ ಬರೀ ಖಾತೆಯಿಂದ ಹಣ ಕಡಿತಗೊಂಡಿರುವ ಬಗ್ಗೆ ಎಸ್‌ಎಂಎಸ್‌ ಬರುತ್ತದೆ. ಆ ಬಗ್ಗೆ ಬ್ಯಾಂಕ್‌ನವರನ್ನು ಸಂಪರ್ಕಿಸಿದರೆ, ‘ನಿಮ್ಮ ಹಣ ಡ್ರಾ ಆಗಿದೆ’ ಎಂಬ ಉತ್ತರ ಬರುತ್ತದೆ. ಒಂದುವೇಳೆ ಗ್ರಾಹಕರು ಖಾತೆ ಹೊಂದಿಲ್ಲದ ಬ್ಯಾಂಕ್‌ನ ಎಟಿಎಂನಲ್ಲಿ ಡ್ರಾ ಮಾಡಿದ್ದರೆ, ಕಳಕೊಂಡ ಹಣವನ್ನು ವಾಪಸ್‌ ಪಡೆಯುವುದು ಮತ್ತಷ್ಟು ಕಷ್ಟ!

Advertisement

ಇತ್ತೀಚಿನ ದಿನಗಳಲ್ಲಿ ಈ ರೀತಿ ಹಣ ಡ್ರಾ ಮಾಡಲು ಹೋಗಿ ದುಡ್ಡು ಕಳೆದುಕೊಂಡು ಕೊನೆಗೆ ಹಣ ವಾಪಾಸ್‌ ಪಡೆದುಕೊಳ್ಳುವುದಕ್ಕೆ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಅಲೆದಾಡುತ್ತಿರುವ ಪ್ರಕರಣ ಗಳು ಹೆಚ್ಚಾಗುತ್ತಿವೆ. ಎಟಿಎಂ ಜತೆಗೆ ಇನ್ನೂ ಹಲವು ತಾಂತ್ರಿಕ ತೊಂದರೆಗಳಿಂದಲೂ ಗ್ರಾಹಕರು ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಜಾಸ್ತಿಯಾಗುತ್ತಿವೆ.

ಕೆಲವು ತಿಂಗಳ ಹಿಂದೆ ನಗರದ ಎರಡು ಪ್ರತ್ಯೇಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಗ್ರಾಹಕರು ಹಣ ಕಳೆದುಕೊಂಡಿರುವ ಘಟನೆಗಳು ನಡೆದಿತ್ತು. ಅಂತಹ ಎರಡು ಪ್ರಕರಣಗಳು ಇದೀಗ ಬೆಳಕಿಗೆ ಬಂದಿದ್ದು, ಒಬ್ಬರು ಗ್ರಾಹಕರು ಎಂಟಿಎಂ ಮೂಲಕ ಹಣ ಡ್ರಾ ಮಾಡಲು ಹೋಗಿ ಹಣ ಕಳೆದುಕೊಂಡಿದ್ದರೆ, ಇನ್ನೊಂದು ಪ್ರಕರಣದಲ್ಲಿ ಗ್ರಾಹಕರೊಬ್ಬರ ಖಾತೆಯಿಂದಲೇ ಏಕಾಏಕಿ ಹಣ ನಾಪತ್ತೆಯಾಗಿ ಹೋಗಿತ್ತು. ಕೊನೆಗೆ ಇಬ್ಬರು ಗ್ರಾಹಕರು ಕೂಡ ಒಂಬುಡ್ಸ್‌ಮನ್‌ಗಳ ಮೊರೆ ಹೋದ ಬಳಿಕ ತಮ್ಮ ದುಡ್ಡು ವಾಪಾಸ್‌ ಪಡೆದುಕೊಂಡರು.

ಒಂದನೇ ಪ್ರಕರಣ 
ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುವ ನಗರದ ನಿವಾಸಿಯೊಬ್ಬರು ದೇರೆಬೈಲ್‌ನಲ್ಲಿರುವ ಖಾಸಗಿ ಬ್ಯಾಂಕ್‌ವೊಂದರ ಎಟಿಎಂನಿಂದ ಎರಡು ತಿಂಗಳ ಹಿಂದೆ 10 ಸಾವಿರ ರೂ. ಡ್ರಾ ಮಾಡುತ್ತಾರೆ. ಆದರೆ 10 ನಿಮಿಷ ಕಾದರೂ ಎಟಿಎಂನಿಂದ ಹಣ ಬಂದಿರುವುದಿಲ್ಲ. ಆದರೆ ಮೊಬೈಲ್‌ಗೆ ಮಾತ್ರ ಹಣ ಡ್ರಾ ಆಗಿರುವುದಾಗಿ ಮೆಸೇಜ್‌ ಬರುತ್ತದೆ. ಆದರೆ, ಆ ಗ್ರಾಹಕರು ತಮ್ಮ ಖಾತೆ ಇಲ್ಲದ ಬ್ಯಾಂಕ್‌ನ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದರು. 

ಹಣ ಕಳೆದುಕೊಂಡ ಆ ಗ್ರಾಹಕ, ತಾವು ಖಾತೆ ಹೊಂದಿರುವ ಬ್ಯಾಂಕ್‌ಗೆ ದೂರು ನೀಡುತ್ತಾರೆ. ದೂರು ನೀಡಿದ ಕೆಲವು ದಿನಗಳ ಬಳಿಕ ‘ನಿಮ್ಮ ಹಣ ಯಶಸ್ವಿಯಾಗಿ ಡ್ರಾ ಆಗಿದೆ’ ಎಂದು ಉತ್ತರ ಬರುತ್ತದೆ. ಬಳಿಕ ಮತ್ತೆರಡು ಬಾರಿ ವಿಚಾರಿಸಿದಾಗಲೂ ಅದೇ ಉತ್ತರ ಕೊಡುತ್ತಾರೆ. ಮುಂದೆ ತಾವು ಎಟಿಎಂನಿಂದ ಡ್ರಾ ಮಾಡಿದ ಬ್ಯಾಂಕ್‌ನ ಮ್ಯಾನೇಜರ್‌ಗೆ ದೂರು ಕೊಟ್ಟಿದ್ದರು. ಅದಕ್ಕೂ ಬ್ಯಾಂಕ್‌ನವರಿಂದ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ ಆ ಗ್ರಾಹಕರು ನೇರವಾಗಿ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರ, ಒಂಬಡ್ಸ್‌ಮನ್‌ಗೆ ದೂರು ನೀಡಿದ್ದರು.

Advertisement

ದಂಡ ಸಹಿತ ಪಾವತಿ
ಈ ರೀತಿ ಸುಮಾರು ಎರಡು ತಿಂಗಳ ಅಲೆದಾಟದ ಬಳಿಕ ಗ್ರಾಹಕರ ಖಾತೆಗೆ ಇದ್ದಕ್ಕಿದ್ದಂತೆ 10 ಸಾವಿರ ರೂ.
ಜಮೆಯಾಗಿ ಬಿಟ್ಟಿದೆ. ಅಷ್ಟೇ ಅಲ್ಲ, ದಿನಕ್ಕೆ 100 ರೂ. ದಂಡದಂತೆ ಒಟ್ಟು 70 ದಿನಗಳ ದಂಡದ ಮೊತ್ತವನ್ನೂ ಸಂಬಂಧಪಟ್ಟ ಬ್ಯಾಂಕ್‌ನವರು ಗ್ರಾಹಕರಿಗೆ ನೀಡಿದ್ದಾರೆ. ಅಂದರೆ, ತಮಗೆ ದುಡ್ಡು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಇಡೀ ಪ್ರಕರಣವನ್ನೇ ಇತ್ಯರ್ಥಗೊಳಿಸಿದ್ದ ಬ್ಯಾಂಕ್‌ನವರು ಕೊನೆಗೆ ಒಂಬುಡ್ಸ್‌ ಮನ್‌ ಮೊರೆ ಹೋದ ಬಳಿಕ ದಂಡ ಸಮೇತ ಸುಮಾರು 17 ಸಾವಿರ ರೂ. ಅನ್ನು ಖಾತೆಗೆ ಜಮೆ ಮಾಡಿರುವುದು ಹೇಗೆ?. ಹೀಗೆ ಹಣ ಕಳೆದುಕೊಂಡಿರುವ ಎಲ್ಲರೂ ಹೋರಾಟ ಮಾಡಲು ಸಾಧ್ಯವೇ? ಎನ್ನುವುದು ನಮ್ಮ ಪ್ರಶ್ನೆ ಎಂದು ಆ ಗ್ರಾಹಕರು ಉದಯವಾಣಿಗೆ ವಿವರಿಸಿದ್ದಾರೆ. 

ಎರಡನೇ ಪ್ರಕರಣ
ರಾಷ್ಟ್ರೀಕೃತ ಬ್ಯಾಂಕೊಂದರ ಗ್ರಾಹಕ ಕಾರ್ಮಿಕರೊಬ್ಬರ ಖಾತೆಯಲ್ಲಿ ಸುಮಾರು 200 ರೂ. ಮೊತ್ತವಿತ್ತು. ಒಂದು
ದಿನ ಆ 200 ರೂ. ಕಟ್ಟಾಗಿದ್ದು, ಮರುದಿನ 2000 ರೂ. ಕಟ್ಟಾಗುತ್ತದೆ. ಆಗ ಗ್ರಾಹಕರ ಖಾತೆಯಲ್ಲಿ ಮೈನಸ್‌
2,000 ರೂ. ಸೂಚಿಸುತ್ತದೆ. ಮುಂದಿನ ತಿಂಗಳು ತನ್ನ ಸಂಬಳ ಬಿದ್ದಾಗ 2,226 ರೂ. ಕಟ್ಟಾದಾಗಲೇ
ಗ್ರಾಹಕರಿಗೆ ತನ್ನ ಖಾತೆಯಲ್ಲಿ ಈ ರೀತಿಯ ವ್ಯವಹಾರ ನಡೆದಿರುವುದು ಬೆಳಕಿಗೆ ಬರುತ್ತದೆ.

ಈ ಕುರಿತು ಗ್ರಾಹಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅದು ನೀವೇ ಡ್ರಾ ಮಾಡಿರುತ್ತೀರಾ ಎಂಬ ಉತ್ತರ ನೀಡುತ್ತಾರೆ. ಮೈನಸ್‌ ಆಗುವವರೆಗೂ ನೀವು ನಮಗೆ ಹಣ ನೀಡುತ್ತೀರಾ? ಎಂದು ಗ್ರಾಹಕ ಮರು ಪ್ರಶ್ನೆ ಕೇಳಿದಾಗ ಬ್ಯಾಂಕ್‌ನವರ ಬಳಿ ಉತ್ತರವೇ ಇಲ್ಲದಂತಾಗುತ್ತದೆ. ಬಳಿಕ ಗ್ರಾಹಕರು ಬ್ಯಾಂಕ್‌ನ ಗ್ರಾಹಕರ ಸೇವಾ ಕೇಂದ್ರಕ್ಕೆ ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ. ಬಳಿಕ ಗ್ರಾಹಕ ಒಂಬುಡ್ಸ್ ಮನ್‌ಗೆ ದೂರು ನೀಡುತ್ತಾರೆ. ಆದರೆ ಹಣ ಕಡಿತಗೊಂಡಿರುವ ಕುರಿತು ಸಿಸಿ ಕೆಮರಾ ಫ‌ೂಟೇಜ್‌ ಸಿಗದೇ ಇದ್ದಾಗ ಒಂಬುಡ್ಸ್‌ ಮನ್‌ ಅವರು ಗ್ರಾಹಕರಿಗೆ 2,000 ರೂ. ನೀಡುವಂತೆ ಆದೇಶಿಸುತ್ತಾರೆ. ಆದರೆ ಈ ಹಣ ಸಿಗುವುದಕ್ಕೂ ಗ್ರಾಹಕರು ಹತ್ತಾರು ಬಾರಿ ಬ್ಯಾಂಕ್‌ ಶಾಖೆಗೆ ಅಲೆದಾಟ ನಡೆಸಿದ್ದಾರೆ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next