ಮುಂಡಗೋಡ: ಮನೆಯೊಂದರಲ್ಲಿ ಜಿಂಕೆಯ ಮಾಂಸ ಇದೆ ಎಂಬ ಮಾಹಿತಿಯ ಮೇಲೆ ದಾಳಿಗೆಂದು ಬಂದಿದ್ದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗ್ರಾಮಸ್ಥರು ಮನೆಯಲ್ಲಿಯೇ ಎರಡು ತಾಸು ದಿಗ್ಭಂದನ ಹಾಕಿದ ಘಟನೆ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶುಕ್ರವಾರ ಗ್ರಾಮದ ಕೆಲವರು ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಮರಳಿದ್ದಾರೆ. ಇದನ್ನು ನೋಡಿ ಜಿಂಕೆ ಬೇಟೆ ಆಡಿದ್ದಾರೆ ಎಂದು ಸಂಶಯಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೇ ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯೊಂದರ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಮನೆಯಲ್ಲಿ ಯಾವುದೇ ಬೇಟೆಯಾಡಿದ ಮಾಂಸ ಇತರ ಸಾಮಗ್ರಿ ಪತ್ತೆಯಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ದಾಳಿಯ ನೇತೃತ್ವ ವಹಿಸಿದ್ದ ಆರ್.ಎಫ್.ಓ ಸುರೇಶ ಕುಲ್ಲೋಳ್ಳಿ ಸಹಿತ ಅರಣ್ಯ ಸಿಬ್ಬಂದಿಗೆ ಮನೆಯಲ್ಲಿಯೇ ದಿಗ್ಭಂದನ ಹಾಕಿದ್ದಾರೆ.
ನಂತರ ಪಿಎಸ್ಐ ಬಸವರಾಜ ಮಬನೂರು ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ನಂತರ ಅರಣ್ಯ ಸಿಬ್ಬಂದಿಯನ್ನು ಪೊಲೀಸ್ ವಾಹನದಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಅಣಿಯಾದರು. ಆದರೆ ಗ್ರಾಮಸ್ಥರು ಮತ್ತೆ ಅರ್ಧ ಗಂಟೆ ಕಾಲ ಅರಣ್ಯ ಸಿಬ್ಬಂದಿ ಹೋಗದಂತೆ ವಾಹನನ್ನು ತಡೆದರು. ಕೊನೆಗೆ ಮಾಹಿತಿ ಕೊಟ್ಟವರ ಹೆಸರು ಹೇಳಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಇದನ್ನೂ ಓದಿ:ಪೋರ್ನ್ ವಿಡಿಯೋ ವೆಬ್‌ಸೈಟ್ ನಿಷೇಧಿಸಿದ್ದರೂ ಸಿಗುತ್ತಿವೆ ಮಕ್ಕಳ ಅಶ್ಲೀಲ ದೃಶ್ಯ ತುಣುಕುಗಳು
ಶನಿವಾರ ಬೆಳಿಗ್ಗೆ ತಮ್ಮ ಊರಿನಲ್ಲೆ ಸಾರ್ವಜನಿಕರ ಸಭೆ ನಡೆಸಿ ಅಧಿಕಾರಿಗಳು ಮಾಹಿತಿ ಕೊಟ್ಟವರ ಹೆಸರು ಬಹಿರಂಗ ಪಡಿಸಬೇಕು ಎಂಬ ಷರತ್ತಿನ ಮೇರೆಗೆ ಅಧಿಕಾರಿಗಳನ್ನು ಮನೆಯಿಂದ ಬಿಡಲಾಯಿತು.