ಬೆಂಗಳೂರು: ಅನುಮಾನಸ್ಪದ ಬೈಕ್ ಹಿಂಬಾಲಿಸಿಕೊಂಡು ಹೋಗಿ ದಾಖಲೆ ಕೇಳಿದ ಪೊಲೀಸರ ಮೇಲೇ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ದಿವ್ಯಜ್ಯೋತಿ ದಾಸ್, ಅಮೀರ್ ಬಿಸ್ವಾಕರ್ಮ, ವಿನೋದ್ ಗುರು, ಅಜಯ್ ತಮನ್ ಹಾಗೂ ಅವರ ಮತ್ತೂಬ್ಬ ಸ್ನೇಹಿತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾ.12ರಂದು ರಾತ್ರಿ 1 ಗಂಟೆ ಸುಮಾರಿಗೆ ಪ್ಯಾರಾಮೌಂಟ್ ಪಿಲಾಟಸ್ ಅಪಾರ್ಟ್‌ಮೆಂಟ್ ಬಳಿ ಪಾಳಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆಗಳಾದ ಚಂದ್ರಶೇಖರ್ ಹಾಗೂ ಸಿದ್ದು ನಾಯ್ಕ ಕೆ.ಎನ್. ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದಾಗ, ಪೇದೆಗಳಿಗೆ ಅನುಮಾನ ಬಂದು ಬೈಕ್ ನಿಲ್ಲಿಸುವಂತೆ ಸೂಚಿಸಿದರೂ ಕೇಳದೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಪೇದೆಗಳಿಬ್ಬರು ಬೈಕ್ ಫಾಲೋ ಮಾಡಿದ್ದಾರೆ. ಯುವಕರು ಅರಕೆರೆಯ ನಂಜಪ್ಪ ಲೇಔಟ್‌ನ ಅಪಾರ್ಟ್‌ಮೆಂಟ್ ಮುಂದೆ ಬೈಕ್ ನಿಲ್ಲಿಸಿದ್ದಾರೆ. ಅಲ್ಲಿಗೆ ತೆರಳಿದ ಪೇದೆಗಳು, ಇಬ್ಬರೂ ಯುವಕರನ್ನು ಹೊರಗೆ ಕರೆದು ಬೈಕ್ ದಾಖಲಾತಿಗಳನ್ನು ನೀಡುವಂತೆ ಕೇಳಿದ್ದಾರೆ.
ಈ ವೇಳೆ ಪೇದೆಯೊಬ್ಬರ ಲಾಠಿ ಕಿತ್ತುಕೊಂಡ ದಿವ್ಯಜ್ಯೋತಿದಾಸ್ ಪೇದೆಗಳನ್ನು ಹೊಡೆಯಲು ಮುಂದಾಗಿದ್ದಾನೆ. ಉಳಿದ ಆರೋಪಿಗಳು ಆತನಿಗೆ ಸಹಕರಿಸಿದ್ದಾರೆ. ಕೂಡಲೇ ಈ ಕುರಿತು ಪೇದೆಗಳು ಕಂಟ್ರೋಲ್ ರೂಮ್‌ಗೆ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿ, ಪೇದೆಗಳನ್ನು ರಕ್ಷಿಸಿ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಅಸ್ಸಾಂ ಮೂಲದ ದಿವ್ಯಜ್ಯೋತಿದಾಸ್, ಐದಾರು ಪಾನಿಪೂರಿ ಅಂಗಡಿಗಳನ್ನು ನಡೆಸುತ್ತಿದ್ದು. ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡು, ಅವರಿಗೆ ವಾಸ್ತವ್ಯ ಕಲ್ಪಿಸಿದ್ದಾನೆ. ಆರೋಪಿಗಳ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.