ಕಮಲನಗರ: ಇಬ್ಬರು ರೌಡಿಶೀಟರ್ ಗಳಿಗೆ ನೋಟಿಸ್ ನೀಡಲು ಹೋಗಿದ್ದ ಲೇಡಿ ಪಿಎಸ್ಐ ಮತ್ತು ಸಿಬ್ಬಂದಿಗಳ ಮೇಲೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ ಘಟನೆ ಜೂ. 7ರಂದು ತಾಲೂಕಿನ ತೋರಣಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಂಡರಿ ಗೌಡ ಮತ್ತು ಭೀಮ ಗೌಡ ಅವರಿಗೆ ತಹಸೀಲ್ದಾರರ ನಿರ್ದೇಶನದ ಮೇರೆಗೆ ಕಮಲನಗರ ಠಾಣೆಯ ಪಿಎಸ್ಐ ನಂದಿನಿ ಹಾಗೂ ಮೂವರು ಸಿಬ್ಬಂದಿಗಳು ನೋಟಿಸ್ ನೀಡಲು ತೋರಣಾ ಗ್ರಾಮದ ಮನೆಗೆ ಹೋಗಿದ್ದರು. ಈ ವೇಳೆ ಇಬ್ಬರು ರೌಡಿಶೀಟರ್ ಹಾಗೂ ಮನೆಯವರು ಬಾಗಿಲು ಮುಚ್ಚಲು ಯತ್ನಿಸಿದ್ದಾರಲ್ಲದೇ ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್ಐ, ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದ ಹಿನ್ನಲೆ ಪಿಎಸ್ಐ ದೂರಿನ ಮೇರೆಗೆ ಒಟ್ಟು 6 ಜನರ ವಿರುದ್ಧ ಕಮಲನಗರ ಠಾಣೆಯಲ್ಲಿ ದೂರು ದಾಖಲಿಸಿ ವಶಕ್ಕೆ ಪಡೆಯಲಾಗಿದೆ.