ನವದೆಹಲಿ: ಪಶ್ಚಿಮಬಂಗಾಳ ಸಚಿವ ಜಾಕೀರ್ ಹುಸೈನ್ ಮೇಲೆ ನಡೆದ ಹಲ್ಲೆ ಒಂದು ಪೂರ್ವಯೋಜಿತ ಸಂಚು. ಕೆಲವು ಜನರು ಹುಸೈನ್ ಅವರಿಗೆ ತಮ್ಮ ಪಕ್ಷ(ಬಿಜೆಪಿ) ಸೇರುವಂತೆ ಒತ್ತಡ ಹೇರುತ್ತಿದ್ದರು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ(ಫೆ.18, 2021) ಆರೋಪಿಸಿದ್ದಾರೆ.
ಇದನ್ನೂ ಓದಿ:ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?
ಬುಧವಾರ(ಫೆ,17) ಪಶ್ಚಿಮಬಂಗಾಳದ ಮುರ್ಷಿದಾಬಾದ್ ನಿಮ್ತಿಟಾ ರೈಲ್ವೆ ನಿಲ್ದಾಣ ಸಮೀಪ ಸಚಿವ ಹುಸೈನ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಎಸೆದು ದಾಳಿ ನಡೆಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಹುಸೈನ್ ಕೋಲ್ಕತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
“ಈ ದಾಳಿ ಪೂರ್ವ ಯೋಜಿತ ಸಂಚಿನಂತಿದೆ. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ಯಾವ ಅಧಿಕಾರಿಗಳೂ ಇರಲಿಲ್ಲವಾಗಿತ್ತು. ವಿದ್ಯುತ್ ಕೂಡಾ ತೆಗೆಯಲಾಗಿತ್ತು. ಇದೊಂದು ಸಂಚು, ನಮಗೆ ಸತ್ಯ ಏನು ಎಂಬುದು ತಿಳಿಯಬೇಕು ಎಂದು ಬ್ಯಾನರ್ಜಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಘಟನೆ ನಡೆದ ಪ್ರದೇಶ ಕೇಂದ್ರ ಸರ್ಕಾರದ ಆಸ್ತಿಯಾಗಿದೆ. ಹುಸೈನ್ ಅವರನ್ನು ಕೊಲ್ಲುವ ಗೇಮ್ ಪ್ಲ್ಯಾನ್ ಇದಾಗಿತ್ತು. ಅವರೊಬ್ಬ ಜನಪ್ರಿಯ ಮುಖಂಡರಾಗಿದ್ದು, ಸಂಚು ರೂಪಿಸಿ ಹತ್ಯೆಗೈಯಲು ವಿರೋಧಿಗಳು ಮುಂದಾಗಿರುವುದಾಗಿ ಮಮತಾ ಆರೋಪಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವವರಿಗೆ ಐದು ಲಕ್ಷ ರೂಪಾಯಿ ಹಾಗೂ ಸಣ್ಣ, ಪುಟ್ಟ ಗಾಯವಾದ ವ್ಯಕ್ತಿಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.