Advertisement

ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ: ಏಳು ಮಂದಿ ಬಂಧನ

12:21 PM Dec 02, 2022 | Team Udayavani |

ಬೆಂಗಳೂರು: ಊಟ ಮುಗಿದಿದೆ ಎಂಬ ಕಾರಣಕ್ಕೆ ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Advertisement

ರೂಪೇನ ಅಗ್ರಹಾರ ನಿವಾಸಿ ಶಂಕರ್‌, ಗಟ್ಟಹಳ್ಳಿ ಕೀರ್ತಿ, ಗಾರ್ವೆಪಾಳ್ಯ ನಿವಾಸಿ ಅಭಿಷೇಕ್‌, ಬಂಡೆಪಾಳ್ಯ ನಿವಾಸಿ ಅಭಿಷೇಕ್‌, ಸೋಮಸುಂದರ ಪಾಳ್ಯ ನಿವಾಸಿ ಪ್ರವೀಣ್‌, ಲಕ್ಕಸಂದ್ರ ನಿವಾಸಿ ಹೇಮಂತ್‌ ಕುಮಾರ್‌, ಕೂಡ್ಲಿ ನಿವಾಸಿ ಅಭಿಲಾಷ್‌ ಬಂಧಿತರು. ತಲೆಮರೆಸಿಕೊಂಡಿರುವ ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರ ಪುತ್ರ ಧನುಷ್‌ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಎಲೆಕ್ಟ್ರಾನಿಕ್‌ ಸಿಟಿಯ ನೀಲಾದ್ರಿ ನಗರದ ರೆಸ್ಟೋರೆಂಟ್‌ವೊಂದರಲ್ಲಿ ನ.20ರಂದು ಘಟನೆ ನಡೆದಿದ್ದು, ತಡರಾತ್ರಿ 11.30ರ ಸುಮಾರಿಗೆ 15ರಿಂದ 20 ಜನರ ಗುಂಪು ರೆಸ್ಟೋರೆಂಟ್‌ಗೆ ಬಂದು ಊಟಕ್ಕೆ ಆರ್ಡರ್‌ ಮಾಡಿದೆ. ಆದರೆ, ರೆಸ್ಟೋರೆಂಟ್‌ ಮುಚ್ಚುವ ಸಮಯವಾಗಿದ್ದು, ಊಟ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಅಷ್ಟಕ್ಕೆ ಯುವಕರ ಗುಂಪು ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಕುಡಿದ ನಶೆಯಲ್ಲಿದ್ದರು ಎಂದು ತಿಳಿದು ಬಂದಿದೆ.

ಯುವಕರ ಗುಂಪು ಹಲ್ಲೆ ಮಾಡಿರುವ ದೃಶ್ಯಗಳನ್ನು ಸ್ಥಳಲ್ಲಿದ್ದ ಗ್ರಾಹಕರೊಬ್ಬರು ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ವೈರಲ್‌ ಆಗಿದೆ. ಘಟನೆ ಯಲ್ಲಿ ಆನೇಕಲ್‌ ತಾಲೂಕಿನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರ ಪುತ್ರ ಕೂಡ ಭಾಗಿಯಾಗಿದ್ದು, ಆತನಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next