ಪಾಟ್ನಾ: ಸಾಲ ಮರುಪಾವತಿಸುವ ವಿಚಾರಕ್ಕೆ ದಲಿತ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಲ್ಲೆ ನಡೆಸಿ ಮೂತ್ರ ಕುಡಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಶನಿವಾರ (ಸೆ.23 ರಂದು) ನಡೆದಿದೆ.
ಘಟನೆ ಹಿನ್ನೆಲೆ: ದಲಿತ ಮಹಿಳೆ ಆರೋಪಿಗಳಿಂದ 1500 ರೂ. ಸಾಲವನ್ನು ತೆಗೆದುಕೊಂಡಿದ್ದರು. ಕೆಲ ತಿಂಗಳ ಬಳಿಕ ಬಡ್ಡಿಸಮೇತವಾಗಿ ಸಾಲವನ್ನು ಮರುಪಾವತಿಸಿದ್ದರು. ಆದರೆ ಸಾಲವನ್ನು ವಾಪಾಸ್ ನೀಡಿದ ಬಳಿಕವೂ ಆರೋಪಿಗಳಾದ ಪ್ರಮೋದ್ ಸಿಂಗ್ ಅವರ ಮಗ ಅಂಶು ಮಹಿಳಗೆ ಮತ್ತೆ ಕಿರುಕುಳ ನೀಡಿದ್ದರು. ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದರು. ಹೆಚ್ಚಿನ ಹಣ ನೀಡಲು ಮಹಿಳೆ ನಿರಾಕರಿಸಿದ್ದರು. ಹಣ ನೀಡದಿದ್ದರೆ ವಿವಸ್ತ್ರಗೊಳಿಸಿ ಊರಿಡೀ ಮೆರವಣಿಗೆ ಮಾಡುತ್ತೇವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದರು.
ಆರೋಪಿಗಳಾದ ಪ್ರಮೋದ್ ಸಿಂಗ್ ಅವರ ಮಗ ಅಂಶು ಹಾಗೂ ಇತರೆ ನಾಲ್ವರು ಸಹಚರರು ಶನಿವಾರ ರಾತ್ರಿ ಮಹಿಳೆಯ ಮನೆಗೆ ಹೋಗಿ ಆಕೆಯನ್ನು ಬಲವಂತವಾಗಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ.
ಆ ಬಳಿಕ ಮಹಿಳೆಯನ್ನು ವಿವಸ್ತ್ರಗೊಳಿಸಿ,ಆಕೆಯನ್ನು ಕೋಲುಗಳಿಂದ ಥಳಿಸಿದ್ದಾರೆ. ಈ ವೇಳೆ ಪ್ರಮೋದ್ ಸಿಂಗ್ ತನ್ನ ಮಗನಿಗೆ ಮಹಿಳೆಯ ಬಾಯಿಗೆ ಮೂತ್ರ ವಿಸರ್ಜನೆ ಮಾಡುವಂತೆ ಹೇಳಿದ್ದಾರೆ. ಆದರೆ ಅದ್ಯಾಗೋ ಮಹಿಳೆ ಅಲ್ಲಿಂದ ಪರಾರಿ ಆಗಿ ಮನೆಗೆ ವಾಪಾಸ್ ಆಗಿದ್ದಾರೆ. ಸದ್ಯ ಮಹಿಳೆಯ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಗ್ರಾಮದಲ್ಲಿ ಈ ಘಟನೆಗೆ ಆಕ್ರೋಶ ವ್ಯಕ್ತವಾಗಿದ್ದು,ಸಂತ್ರಸ್ತೆ ಕುಟುಂಬ ಹಾಗೂ ದಲಿತ ಸಮುದಾಯದವರು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆ ಬಳಿಕ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಹಿಂದೆ ಕೂಡ ಮಹಿಳೆ ಆರೋಪಿಗಳ ಕಿರುಕುಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.