ಬೆಂಗಳೂರು: ಯಾದಗಿರಿಯಲ್ಲಿ ಜೆಡಿಎಸ್‌ನ ಕಾರ್ಯಕರ್ತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಸಂಬಂಧಪಟ್ಟ ಸಬ್‌ಇನ್‌ಸ್ಪೆಕ್ಟರ್ ಬಾಪುಗೌಡ ಅವರನ್ನು ಕೂಡಲೇ ಅಮಾನತುಪಡಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಾದಗಿರಿಯಲ್ಲಿ ಮುಖ್ಯ ಮಂತ್ರಿಗಳು ಪ್ರಯಾಣಿಸುವ ವಾಹನವನ್ನು ಅಡ್ಡಗಟ್ಟಿದರೆಂಬ ಕಾರಣಕ್ಕೆ ಪಕ್ಷದ ಕಾರ್ಯಕರ್ತನ ಮೇಲೆ ಪೊಲೀಸರು ಹೇಯಕೃತ್ಯ ನಡೆಸಿದ್ದು, ಅದನ್ನು ಖಂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ.
ಮುಖ್ಯಮಂತ್ರಿಗಳ ವಾಹನಕ್ಕೆ ಯಾವುದೇ ರೀತಿ ಹಾನಿ, ಅವಮಾನ ಮಾಡಿಲ್ಲ. ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೀಡಿದ್ದ ಅನುದಾನ ಕಡಿತಗೊಳಿ ಸಿದ್ದು, ಈ ಬಗ್ಗೆ ಮನವಿ ಮಾಡಲು ಹೋಗಿ ದ್ದರು. ಆ ಮೂಲಕ ಯಡಿಯೂರಪ್ಪ ಅವರು ಅನುದಾನದ ವಿಚಾರದಲ್ಲಿ ರಾಜಕೀಯ ಸೇಡು ತೋರಿಸಿದ್ದಾರೆಂದು ಕಿಡಿ ಕಾರಿದರು. ಆ ದಿನ ರಾತ್ರಿ ಗುರುಮಿಟ್ಕಲ್ ಯುವ ಘಟಕದ ಕಾರ್ಯಾಧ್ಯಕ್ಷ ಮಾರ್ಕಂಡಪ್ಪ ಮಾನೇಗಾರ್ ಮೇಲೆ ಎಫ್ಐಆರ್ ದಾಖಲಿಸಿ ಅದರಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ್ ಹೆಸರು ಸೇರಿಸಿದ್ದಾರೆ.
ಪಕ್ಷದ ಕೋಲಿ ಸಮುದಾಯದ ಮುಖಂಡನನ್ನು ಸಬ್‌ಇನ್ಸ್‌ಪೆಕ್ಟರ್ ಹಾಗೂ ಪೇದೆಗಳು ಮನಸೋ ಇಚ್ಛೆ ಥಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಬೂಟ್ ಕಾಲಿನಲ್ಲಿ, ಬೆಲ್ಟ್ನಲ್ಲಿ ಹೊಡೆದಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಶರಣಗೌಡ ಕುಂದಕೂರ ಅವರೇ ಮುಖ್ಯಮಂತ್ರಿಗಳು ಬಂದಾಗ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದರು ಎಂಬುದಾಗಿ ಲಿಖೀತವಾಗಿ ಬರೆದುಕೊಡುವಂತೆ ಒತ್ತಡ ಹೇರಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ಕಾರ್ಯಕರ್ತನ ಬಾಯಲ್ಲಿ ಪಿಸ್ತೂಲ್ ಇಟ್ಟು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧ ಕೇಳಿಬಂದ ಆಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಶರಣಗೌಡ ಅವರನ್ನು ಸಿಲುಕಿಸಲು ಪೊಲೀಸರು ಮುಂದಾಗಿದ್ದಾರೆ. ಇದನ್ನು ಸರ್ಕಾರವೇ ಹೇಳಿ ಮಾಡಿಸಿದಂತಿದೆ. ಯಡಿಯೂರಪ್ಪ ವಿರುದ್ಧದ ಕುಟುಕು ಕಾರ್ಯಾಚರಣೆಗೆ ಸೇಡು ತೀರಿಸಿಕೊಳ್ಳಲು ಪೊಲೀಸರು ಹೀಗೆ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡಿದಾಗ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ನಂತರ ಕ್ರಮ ಕೈಗೊಳ್ಳಲು ಕಷ್ಟವಾಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದರ ಹಿಂದೆ ಸರ್ಕಾರದ ಒತ್ತಡವಿರಬಹುದು ಎಂದರು.
ಇತಿಹಾಸದಲ್ಲೇ ಸಬ್‌ಇನ್‌ಸ್ಪೆಕ್ಟರ್ ಪಿಸ್ತೂಲ್ ಬಾಯಿಗಿಟ್ಟಿರುವುದು ಕೇಳಿದ್ದು ಇದೇ ಮೊದಲು. ಪೊಲೀಸರು ಇಂತಹ ಹೀನ ಕೃತ್ಯ ಮಾಡಬಾರದು. ಹಾಗಾಗಿ ಸಬ್‌ಇನ್ಸ್ ಪೆಕ್ಟರ್, ಪೇದೆಯನ್ನು ಅಮಾನತುಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದರು. ದೇವೇಗೌಡರ ಪತ್ರಕ್ಕೂ ಮುಖ್ಯಮಂತ್ರಿಗಳು ಬೆಲೆ ಕೊಡುವುದಿಲ್ಲ ಅಂದರೆ ನನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದಕ್ಕೆ ಏನು ಮಾಡಬೇಕೆಂದು ಯೋಚನೆ ಮಾಡುತ್ತೇನೆಂದು ತಿಳಿಸಿದರು.