ಕಾಬೂಲ್: ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಆತ್ಮಾಹುತಿ ಉಗ್ರ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದು, 57 ಜನರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಪಶ್ಚಿಮ ಕಾಬೂಲ್‌ನ ಡ್ಯಾಶ್-ಎ-ಬಾರ್ಚಿಯ ಶಿಯಾ ಶಿಕ್ಷಣ ಕೇಂದ್ರದ ಹೊರಗೆ ಈ ಸ್ಪೋಟ ಸಂಭವಿಸಿದೆ. ದಾಳಿಕೋರನು ಶಿಕ್ಷಣ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಈ ವೇಳೆ ಸ್ಪೋಟ ನಡೆದಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ಹೇಳಿದ್ದಾರೆ.
ಯಾವುದೇ ಭಯೋತ್ಪಾದಕ ಗುಂಪು ಈ ಬಾಂಬ್ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ದಾಳಿಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಉಗ್ರ ಸಂಘಟನೆ ತಾಲಿಬಾನ್ ಹೇಳಿಕೊಂಡಿದೆ.
ದಾಳಿಯಲ್ಲಿ ಇದುವರೆಗೆ 18 ಮಂದಿ ಅಸುನೀಗಿದ್ದು, 57 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ರಾಜಧಾನಿಯ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯೊಂದು ಆಗಸ್ಟ್ 2018 ರಲ್ಲಿ ಶಿಕ್ಷಣ ಕೇಂದ್ರವೊಂದರಲ್ಲಿ ಇದೇ ರೀತಿಯ ಆತ್ಮಹತ್ಯಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಆ ದಾಳಿಯಲ್ಲಿ 34 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.