ನವದೆಹಲಿ: ಜಮ್ಮು-ಕಾಶ್ಮೀರ (Jammu and Kashmir)ದ ಜಮ್ಮು ದರ್ಬಾರ್ ಸಮೀಪದ ಸಂಜ್ವಾನ್ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ಡ್ರೋನ್ ಮೂಲಕ ದಾಳಿ ನಡೆಸಿದ ಘಟನೆ ಸೋಮವಾರ (ಸೆ.೦2) ನಡೆದಿದ್ದು, ಯೋಧರೊಬ್ಬರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಸೋಮವಾರ ಬೆಳಿಗ್ಗೆ ಸೇನಾ ಶಿಬಿರದ ಸೆಂಟ್ರಿ (Sentry) ಪೋಸ್ಟ್ ಸಮೀಪ ದಾಳಿ ನಡೆದಿದೆ. ಇದು ಯೋಧರ 36ನೇ ಇನ್ ಫ್ಯಾಂಟ್ರಿ ಬ್ರಿಗೇಡ್ ಆಗಿರುವುದಾಗಿ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿರುವುದಾಗಿ ಮೂಲಗಳು ಹೇಳಿವೆ. ಆಗಸ್ಟ್ 31ರಂದು ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್ ಸೆಕ್ಟರ್ ಸಮೀಪದ ಗಡಿನಿಯಂತ್ರಣ ರೇಖೆ (LoC) ಬಳಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದವು.
ನಂತರ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಘರ್ಷಣೆ ಹೆಚ್ಚಳವಾಗಿರುವುದಾಗಿ ವರದಿ ವಿವರಿಸಿದೆ.