Advertisement

ಜೈಲು ಹಕ್ಕಿಗಳಿಗೂ ರೆಕ್ಕೆಪುಕ್ಕ ಜೋಡಿಸಿ, ಹಾರಲು ಬಿಡಿ !

07:43 AM Sep 16, 2017 | Team Udayavani |

ಹೊಸದಿಲ್ಲಿ: ಎಲ್ಲರ ಹಾಗೆ, ಜೈಲುಗಳಲ್ಲಿರುವ ಕೈದಿಗಳಿಗೂ ಹೊರಜಗತ್ತಿನ ಸಂಪರ್ಕ ಸಿಗುವಂತೆ ಮಾಡಿ, ಕೆಲಸಕ್ಕೆಂದು ಜೈಲಿನಿಂದ ಬೆಳಗ್ಗೆ ಹೋಗಿ, ಸಂಜೆ ವಾಪಸ್‌ ಬರುವ ಹಾಗೆ ವ್ಯವಸ್ಥೆ ಮಾಡಬಹುದಲ್ಲ ಎಂದು ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿದೆ.

Advertisement

ದೇಶದ 1,382 ಜೈಲುಗಳಲ್ಲಿರುವ ಅವ್ಯವಸ್ಥೆಯನ್ನು ಪರಿಗಣಿಸಿ, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸುತ್ತಿರುವ ಕೋರ್ಟ್‌, ಎಲ್ಲ ರಾಜ್ಯಗಳಲ್ಲೂ ತೆರೆದ ಬಂದೀಖಾನೆ (ಓಪನ್‌ ಜೈಲ್‌) ಆರಂಭಿಸುವಂತೆ ಹೇಳಿದೆ. ಇದಷ್ಟೇ ಅಲ್ಲ, ಮೊದಲ ಬಾರಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಬಂದ ವರಿಗೆ ಧೈರ್ಯ ತುಂಬಲು ಆಪ್ತ ಸಮಾ ಲೋಚಕರು ಮತ್ತು ಸಿಬಂದಿ ನೇಮಿಸಿ ಎಂದು ಸೂಚನೆ ನೀಡಿದೆ. ತೆರೆದ ಬಂದೀಖಾನೆಗಳಲ್ಲಿ ಕಾರಾ ಗೃಹ ಸಿಬಂದಿಯ ನಿಯಂತ್ರಣ ಕಡಿಮೆ ಇರುವುದರಿಂದ ಕೈದಿಗಳ ಮೇಲೆ ದೈಹಿಕ ಹಿಂಸೆ ನಡೆಯುವುದು ಕಡಿಮೆ. ಜತೆಗೆ ಸದ್ಯ ಜೈಲುಗಳು ಅಗತ್ಯಕ್ಕಿಂತ ಹೆಚ್ಚು ಕೈದಿಗಳನ್ನು ಹೊಂದಿದ್ದು, ಜಾಗದ ಕೊರತೆಯಿಂದ ನಲುಗುತ್ತಿವೆ. ಈ ಸಮಸ್ಯೆಗೂ ಓಪನ್‌ ಜೈಲು ಉತ್ತಮ ಪರಿಹಾರ ಎಂದು ನ್ಯಾ| ಮದನ್‌ ಬಿ. ಲೋಕುರ್‌ ಅವರ ನೇತೃತ್ವದ ಪೀಠ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿದೆ.

ಕುಟುಂಬದವರ ಭೇಟಿಗೆ ಅವಕಾಶ ಕೊಡಿ: ಕೈದಿಗಳನ್ನು ಹೊರಜಗತ್ತಿನಿಂದ ಸಂಪೂರ್ಣವಾಗಿ ಮುಚ್ಚಿಡಬೇಡಿ. ಅವರ ಕುಟುಂಬ ಸದಸ್ಯರು ಭೇಟಿ ಗೆಂದು ಬಂದಾಗ ಹೆಚ್ಚಿನ ಸಮಯಾವ ಕಾಶ ನೀಡಿ. ಅಲ್ಲದೆ ಹೆಚ್ಚೆಚ್ಚು ಬಾರಿ ಬಂದು ಹೋಗುವಂತೆ ಅನುವು ಮಾಡಿ ಕೊಡಿ ಎಂದೂ ಕಾರಾಗೃಹಗಳ ಅಧಿ ಕಾರಿಗಳಿಗೆ ಸಲಹೆ ನೀಡಿದೆ.

ಅಸಹಜ ಸಾವಿಗೆ ಪರಿಹಾರ ಕೊಡಿಸಿ: ಇಷ್ಟು ಮಾತ್ರವಲ್ಲದೆ ಜೈಲು ಸೇರಿ ಅಸಹಜ ಸಾವಿಗೆ ತುತ್ತಾದ ಪ್ರಕರಣಗಳು ಜೈಲಿನಲ್ಲಿ ನಡೆದಿದ್ದರೆ, ಸ್ವಯಂ ಪ್ರೇರಣೆಯಿಂದ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ದೇಶದ 24 ಹೈಕೋರ್ಟ್‌ಗಳಿಗೆ ಸೂಚಿಸಿದೆ ಹಾಗೂ ಮೃತ ಪಟ್ಟವರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next