5 ವರ್ಷ ಆಟೋ ಓಡಿಸಿಕೊಂಡಿದ್ದ ಗಿರೀಶ್, ಈಗ ಹೀರೋ. ಈ ವಾರ ತೆರೆಗೆ ಕಾಣುತ್ತಿರುವ ಚಿತ್ರವಿದು. ಗಿರೀಶ್‌ಗೆ ಕನಸಿಗೆ ಬಣ್ಣ ತುಂಬಿದ್ದು ಗೆಳೆಯರಾದ ರಮೇಶ್ ಮತ್ತು ಹರೀಶ್. ರಮೇಶ್ ಈ ಚಿತ್ರದ ನಿರ್ಮಾಪಕರಾದರೆ, ಹರೀಶ್ ನಿರ್ದೇಶಕರು.
ಕಲರ್‌ಫುಲ್ ಜಗತ್ತಿನ ಕರಾಮತ್ತೇ ಅಂಥದ್ದು! ಇಲ್ಲಿ ಅದೃಷ್ಟ ಇದ್ದರೆ ಯಾರು ಏನು ಬೇಕಾದರೂ ಆಗಬಹುದು. ಈಗಾಗಲೇ ಅದು ಸಾಬೀತಾಗಿದ್ದುಂಟು. ಬಸ್ ಕಂಡಕ್ಟರ್ ಆಗಿದ್ದವರು ಸೂಪರ್ ಸ್ಟಾರ್ ಆಗಿದ್ದಾರೆ. ಲೈಟ್‌ಬಾಯ್ ಎನಿಸಿಕೊಂಡವರು ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಫೈಟರ್ ಆಗಿದ್ದವರು “ಸಿನಿ ದುನಿಯಾ’ದ ಹೀರೋ ಆಗಿದ್ದಾರೆ. ಹಾಗೆಯೇ, ಇಲ್ಲೊಬ್ಬ ಆಟೋ ಡ್ರೈವರ್ ಆಗಿದ್ದವರು ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಹೌದು, ಐದು ವರ್ಷಗಳ ಕಾಲ ಆಟೋ ಓಡಿಸಿಕೊಂಡಿದ್ದ ಗಿರೀಶ್, ಈಗ ಹೀರೋ. ಯಾವ ಗಿರೀಶ್ ಅಂದರೆ, “ಸ್ಟೈಲ್‌ರಾಜ’ ಸಿನಿಮಾ ತೋರಿಸಬೇಕು. ಈ ವಾರ ತೆರೆಗೆ ಕಾಣುತ್ತಿರುವ ಚಿತ್ರವಿದು. ಆಟೋ ಓಡಿಸಿಕೊಂಡಿದ್ದ ಗಿರೀಶ್‌ಗೆ ತಾನೂ ಹೀರೋ ಆಗುವ ಆಸೆ ಇತ್ತು. ಅವರ ಕನಸಿಗೆ ಬಣ್ಣ ತುಂಬಿದ್ದು ಅವರ ಗೆಳೆಯರಾದ ರಮೇಶ್ ಮತ್ತು ಹರೀಶ್. ರಮೇಶ್ ಈ ಚಿತ್ರದ ನಿರ್ಮಾಪಕರಾದರೆ, ಹರೀಶ್ ನಿರ್ದೇಶಕರು. “ಸ್ಟೈಲ್ ರಾಜ’ ಚಿತ್ರದಲ್ಲಿ ಗಿರೀಶ್ ಹೀರೋ ಆಗಿದ್ದರೂ, ಅಲ್ಲಿ ಚಿಕ್ಕಣ್ಣ ಹೈಲೆಟ್. “ಹೊಸ ತಂಡವೇ ಸೇರಿ ಹೊಸಬಗೆಯ ಚಿತ್ರ ಮಾಡಿದೆ. ಇದು ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ. ನಿಮ್ಮಗಳ ಸಹಕಾರ ಇರಲಿ’ ಅಂದರು ಗಿರೀಶ್.
ನಿರ್ದೇಶಕ ಹರೀಶ್‌ಗೆ ಸಿನಿಮಾ ಚೆನ್ನಾಗಿ ಮಾಡಿರುವ ನಂಬಿಕೆ. ಅದನ್ನು ಜನರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವೂ ಇದೆಯಂತೆ. ಗೆಳೆಯರು ಸೇರಿ ಒಂದೊಳ್ಳೆಯ ಚಿತ್ರ ಮಾಡಿದ್ದೇವೆ. “ಒಬ್ಬ ಹಳ್ಳಿಯ ಮುಗ್ಧ ಹುಡುಗ ಬೆಂಗಳೂರಿಗೆ ಬಂದು, ಪ್ರೀತಿಗೆ ಬಿದ್ದು, ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅನ್ನೋದು ಚಿತ್ರದ ಸಾರಾಂಶ. ಇಲ್ಲಿ ಹಾಡುಗಳು, ಲೊಕೇಷನ್‌ಗಳು ಹೊಸದಾಗಿವೆ’ ಅಂದರು ಹರೀಶ್.
ನಿರ್ಮಾಪಕ ರಮೇಶ್‌ಗೆ ಬಹಳಷ್ಟು ಮಂದಿ ಸಾಥ್ ಕೊಟ್ಟು, ಧೈರ್ಯ ತುಂಬಿದ್ದರಂತೆ. ಹಾಗಾಗಿ, ಚಿತ್ರವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ನಿರ್ಮಿಸಿದ್ದಾರಂತೆ.
ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾರಿಜೋನ್ ಸ್ಟುಡಿಯೋದ ಟೋನಿ ಚಿತ್ರವನ್ನು ವಿತರಣೆ ಮಾಡುತಿದ್ದಾರೆ ಎಂದರು ಅವರು.
ಇನ್ನು, ಚಿತ್ರಕ್ಕೆ ಚಂದ್ರಣ್ಣ ಎಂಬುವವರು, ಸಹಕಾರ ನೀಡುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಸಾಥ್ ಕೊಟ್ಟಿದ್ದಾರಂತೆ. ಲೋಕಿ ಚಿತ್ರದ 6 ಹಾಡುಗಳನ್ನು ರಚಿಸಿದ್ದಾರೆ. ಎಂ.ಬಿ.ಅಳ್ಳಿಕಟ್ಟೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ಅಂದು ನಾಯಕಿ ರನೂಷಾ ಹೆಚ್ಚು ಮಾತಾಡದೆ, “ಸಿನಿಮಾ ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ’ ಎಂದಷ್ಟೇ ಹೇಳಿ ಸುಮ್ಮನಾದರು.