Advertisement

ಅವಸಾನದತ್ತ ಕುಟುಂಬ ವೈದ್ಯ ಪದ್ಧತಿ

06:00 AM Sep 19, 2018 | |

ಒಬ್ಬ ತಜ್ಞ ವೈದ್ಯನಲ್ಲಿಗೆ ಹೋದರೆ ಸಾವಿರಾರು ರೂಪಾಯಿಗಳನ್ನು ವ್ಯಯಿಸುವ ಜನ, ಕುಟುಂಬ ವೈದ್ಯರಿಗೆ ನೂರಿನ್ನೂರು ನೀಡಲೂ ಹಿಂದೇಟು ಹಾಕುತ್ತಾರೆ. ಇಲ್ಲೂ ಚೌಕಾಸಿ ಬೇರೆ. ಉಚಿತವಾಗಿ ಪರೀಕ್ಷೆ ಮಾಡಿಸಿ, ಸಲಹೆ ಪಡೆದು ಉಡಾಫೆಯಿಂದ ಹಾಗೇ ಎದ್ದು ಹೋಗುವ ಮಹಾನುಭಾವರೂ, ಸಾಲ ಮಾಡಿ ಹೋಗುವವರೂ ಇದ್ದಾರೆ.

Advertisement

ಇತ್ತೀಚೆಗೆ ವೈದ್ಯಕೀಯ ಕಾಲೇಜ್‌ ಆಸ್ಪತ್ರೆಯೊಂದರ ಹೊರರೋಗಿ ವಿಭಾಗದಲ್ಲಿ ರೋಗಿಗಳನ್ನು ಗಮನಿಸುತ್ತಾ ಕುಳಿತಿದ್ದೆ. ಬಂದ ರೋಗಿಗಳಲ್ಲಿ ಹೆಚ್ಚಿನವರು ಜ್ವರ -ಶೀತದಂಥ ಸಾಮಾನ್ಯ ಕಾಯಿಲೆಯವರು. ತಜ್ಞ ವೈದ್ಯರ ಮತ್ತು ವಿಶೇಷ ತಪಾಸಣೆಯ ಅಗತ್ಯವಿಲ್ಲದವರು. ಹೆಚ್ಚಿನ ರೋಗಿಗಳು 20-50 ಕಿ.ಮೀ ದೂರದಿಂದ ಬಂದವರು!ಇಂಥ ಸಣ್ಣಪುಟ್ಟ ಕಾಯಿಲೆ ಕಸಾಲೆಗಳಿಗೆ ಅಷ್ಟು ದೂರದಿಂದ ಹಣ, ಶ್ರಮ ಹಾಗೂ ಸಮಯ ವಿನಿಯೋಗಿಸಿ, ಒಂದು ತೃತೀಯ ಸ್ತರ ಆರೈಕೆ ಕೇಂದ್ರ (three tier care centre)ಕ್ಕೆ ಬರುವ ಅಗತ್ಯವಿತ್ತೇ? ಒಂದು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನೂ ಜನರಿಗೆ ಸರಿಯಾಗಿ ಕೊಡಲಾಗದ ದುಃಸ್ಥಿತಿಗೆ ನಾವು ಬಂದಿದ್ದೇವೆಯೇ? ಪ್ರಶ್ನೆಯ ಜಾಡು ಹಿಡಿದು ಹೊಗುತ್ತಿದ್ದಂತೆ ಉತ್ತರ ಸ್ಪಷ್ಟವಾಗತೊಡಗಿತು. ಅದುವೇ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯಲ್ಲಿ ತೀವ್ರ ವೈಫ‌ಲ್ಯ ಕಾಣುತ್ತಿರುವ ಸರಕಾರಿ ವ್ಯವಸ್ಥೆ ಹಾಗೂ ಈ ಕ್ಷೇತ್ರದಿಂದ ವಿಮುಖವಾಗುತ್ತಿರುವ ಖಾಸಗಿ ವ್ಯವಸ್ಥೆ. ಅಂದರೆ ಕುಟುಂಬ ವೈದ್ಯ ಪದ್ಧತಿ, ಅದರ ಬೆನ್ನೆಲುಬಾದ ಕುಟುಂಬ ವೈದ್ಯರು. 

ಒಂದು ಕಾಲದಲ್ಲಿ ಸಮಾಜದ ಆರೋಗ್ಯ ವ್ಯವಸ್ಥೆಯ ಕೇಂದ್ರ ಬಿಂದುವಾಗಿದ್ದ ಕುಟುಂಬ ವೈದ್ಯರ ಸಂಖ್ಯೆ ಕಾಲದ ಹೊಡೆತಕ್ಕೆ ಸಿಕ್ಕಿ ಇಳಿಮುಖವಾಗುತ್ತಾ ಅಳಿವಿನಂಚಿಗೆ ತಲುಪಿರುವುದು ದುರಂತ.  ಅದೊಂದು ಕಾಲವಿತ್ತು, ಕುಟುಂಬ ವೈದ್ಯನೆಂದರೆ ಅವನು ಕೇವಲ ವೈದ್ಯ ಮಾತ್ರವಲ್ಲ ಎಲ್ಲರಿಗೂ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕ. ಅವನ ಸಲಹೆಯಿಲ್ಲದೆ ಯಾರೊಬ್ಬನೂ ಉನ್ನತ ಚಿಕಿತ್ಸೆಗೆ ತಜ್ಞ ವೈದ್ಯರ/ ಅಸ್ಪತ್ರೆಗಳ ಕದ ತಟ್ಟುತ್ತಿರಲಿಲ್ಲ. ಕುಟುಂಬ ವೈದ್ಯನೂ ರೋಗಿಯ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ-ಆರ್ಥಿಕ ಸ್ಥಿತಿಗತಿ, ಹಾಗೂ ಕುಟುಂಬ ಸದಸ್ಯರ ಆರೋಗ್ಯ ಹಿನ್ನೆಲೆ ಎಲ್ಲವನ್ನೂ ತಿಳಿದುಕೊಂಡವನಾಗಿದ್ದ. ದಿನದ ಎಲ್ಲಾ ಸಮಯದಲ್ಲೂ ಚಿಕಿತ್ಸೆ- ಸಲಹೆ ನೀಡುವವನಾಗಿದ್ದ. ಅದು ಕೂಡಾ ಕೈಗೆಟಕುವ ವೆಚ್ಚದಲ್ಲಿ. ರೋಗಿ ಬಂದೊಡನೆ ಒಂದಿಷ್ಟು ಲೋಕಾಭಿರಾಮದ ಹರಟೆ, ಕುಟುಂಬ ಸದಸ್ಯರ ಆರೋಗ್ಯದ ವಿಚಾರಣೆ, ನಂತರ ರೋಗಿಗೆ ಚಿಕಿತ್ಸೆ, ಹೀಗೆ ವೈದ್ಯ ಕುಟುಂಬದ ಒಂದು ಭಾಗವೇ ಆಗಿರುತ್ತಿದ್ದ ಹಾಗೂ ರೋಗಿ ವೈದ್ಯನ ಸಂಬಂಧ ಮಧುರವಾಗಿತ್ತು, ವೈದ್ಯ ಸೇವೆಯೂ ತೃಪ್ತಿಕರವಾಗಿತ್ತು. ವೈದ್ಯನ ಮೇಲಿನ ವಿಶ್ವಾಸ, ನಂಬಿಕೆ, ರೋಗ ವಾಸಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. 

ಇಂದು ಪರಿಸ್ಥಿತಿ ತಿರುವುಮುರುವಾಗಿದೆ. ಹೊಸಬರಾರೂ ಕುಟುಂಬ ವೈದ್ಯರಾಗಲು ಮುಂದಾಗುತ್ತಿಲ್ಲ. ಕುಟುಂಬ ವೈದ್ಯರ ಜಾಗವನ್ನು ನಕಲಿ ವೈದ್ಯರು ತುಂಬುತ್ತಿದ್ದಾರೆ.  ದೇಶದಲ್ಲಿ ಎಷ್ಟು ಕುಟುಂಬ ವೈದ್ಯರಿದ್ದಾರೆ ಎಂಬ ಖಚಿತ ಮಾಹಿತಿ, ಅಂಕಿ ಅಂಶ ಲಭ್ಯವಿಲ್ಲವಾದರೂ ಒಂದು ಅಂದಾಜಿನ ಪ್ರಕಾರ ಪ್ರತಿ 1,000 ಜನರಿಗೆ ಲಭ್ಯವಿರುವ ಕುಟುಂಬ ವೈದ್ಯರ ಸಂಖ್ಯೆ 0.16 ಮಾತ್ರ. ಇದು ತೀರಾ ಶೋಚನೀಯವಾಗಿದ್ದು ಕೆನಡಾದಂತಹ ದೇಶದಲ್ಲಿ ಈ ಅನುಪಾತ ಸರಾಸರಿ 10:1000 ಇದೆ. ಬೇರೆ ದೇಶಗಳ ಜತೆಗೆ ತುಲನೆ ಮಾಡಿದಲ್ಲಿ ಭಾರತದಲ್ಲಿ ತಜ್ಞ ವೈದ್ಯರ ಸಂಖ್ಯೆ ತುಸು ಹೆಚ್ಚೇ ಇರುವುದು (ತುಲನಾತ್ಮಕವಾಗಿ ಒಟ್ಟು ವೈದ್ಯರ ಸಂಖ್ಯೆಗೆ) ಸಮೀಕ್ಷೆಗಳಿಂದ ದ‌ೃಢಪಟ್ಟಿದೆ. ಈ ವಿಷಮ ಅನುಪಾತ ಅವೈಜ್ಞಾನಿಕವೂ, ಅತಾರ್ಕಿಕವೂ ಆಗಿದೆ. 

ಕುಟುಂಬ ವೈದ್ಯರೇ ಏಕೆ ಬೇಕು?
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಕುಟುಂಬ ವೈದ್ಯರ ಸ್ಥಾನ ಮಹತ್ತರವಾಗಿದ್ದು, ಈವರೆಗೆ ನಡೆಸಲಾದ ಅಧ್ಯಯನಗಳೂ, ರಚಿಸಲಾದ ಆರೋಗ್ಯ ಸಮಿತಿಗಳೂ ಈ ಅಂಶವನ್ನು ಸಾರಿ ಹೇಳಿವೆ. 1946ರಲ್ಲಿ ರಚಿಸಲಾದ ಭೋರ್‌ ಸಮಿತಿ ಕುಟುಂಬ ವೈದ್ಯ ಕೇಂದ್ರೀಕೃತ ಆರೋಗ್ಯ ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಿತ್ತು. ತದನಂತರ 1983ರ ವೈದ್ಯಕೀಯ ಶಿಕ್ಷಣ ಸಮಿತಿ ಈ ಅಂಶವನ್ನು ಮತ್ತೂಮ್ಮೆ ಎತ್ತಿ ಹಿಡಿದಿತ್ತು. ಆರೋಗ್ಯ -ಕುಟುಂಬ ಕಲ್ಯಾಣ ಇಲಾಖೆಯ 92ನೇ ಸಂಸದೀಯ ಮಂಡಳಿ 2016ರಲ್ಲಿ ನೀಡಿದ ವರದಿ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕುಟುಂಬ ವಿಜ್ಞಾನದ ಬೋಧನೆ,ಕಲಿಕೆಗೆ ಉತ್ತೇಜನ ನೀಡಬೇಕೆಂದು ಶಿಫಾರಸು ಮಾಡಿತ್ತು. 

Advertisement

ಒಬ್ಬ ಹೃದಯ ತಜ್ಞ ಹೃದಯ ಪರೀಕ್ಷಿಸುತ್ತಾನೆ, ಮೂಳೆ ತಜ್ಞ ಎಲುಬು ಪರೀಕ್ಷಿಸುತ್ತಾನೆ. ಆದರೆ ಒಬ್ಬ ಕುಟುಂಬ ವೈದ್ಯ ರೋಗಿಯನ್ನು ಪರಿಪೂರ್ಣವಾಗಿ ಪರೀಕ್ಷಿಸುತ್ತಾನೆ ಹೊರತು ಅಂಗಾಂಗಗಳನ್ನು ಪ್ರತ್ಯೇಕಿಸಿ ಅಲ್ಲ. ಇದು ಒಂದು ರೀತಿಯಲ್ಲಿ ಏಕ ಗವಾಕ್ಷಿ ಪದ್ಧತಿ ಇದ್ದ ಹಾಗೆ. ಇಲ್ಲಿ ರೋಗಿಯ ಸಂಪೂರ್ಣ ಪರೀಕ್ಷೆ ಒಬ್ಬನೇ ಮಾಡುವುದರಿಂದ ಸಮಗ್ರತೆ (Holistic approach) ಸಾಧಿಸಿ, ಸರಿಯಾದ ರೋಗ ನಿರ್ಣಯ ಸಾಧ್ಯವಾಗುತ್ತದೆ. ಇದರಿಂದ ರೋಗಿಯ ಸಮಯ, ಹಣ ಹಾಗೂ ಶ್ರಮದ ಉಳಿತಾಯವಾಗುತ್ತದೆ. ಅನಗತ್ಯ ಪರೀಕ್ಷೆಗಳ ಕಾಟವೂ ತಪ್ಪುತ್ತದೆ. ರೋಗಿಯ ಕೌಟುಂಬಿಕ ಹಿನ್ನೆಲೆ, ವೈದ್ಯನ ಆತ್ಮೀಯತೆ, ಕುಟುಂಬ ವೈದ್ಯನ ಮೇಲಿರುವ ವಿಶ್ವಾಸ, ಭರವಸೆ, ಇದಕ್ಕೆ ಪೂರಕ ಅಂಶಗಳಾಗಿ ರೋಗಿ ಗುಣಮುಖವಾಗಲು ಧನಾತ್ಮಕವಾಗಿ ಸಹಕರಿಸುತ್ತವೆ. ಅಗತ್ಯ ಬಿದ್ದಲ್ಲಿ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನುರಿತ ತಜ್ಞ ವೈದ್ಯರಲ್ಲಿ ಕಳುಹಿಸುವ ಅನುಭವ ಹಾಗೂ ಸೈದ್ಧಾಂತಿಕ ಜ್ಞಾನ ಕುಟುಂಬ ವೈದ್ಯನಿಗಿರುವುದರಿಂದ, ರೋಗಿ ವೃಥಾ ಒಬ್ಬ ವೈದ್ಯನಿಂದ ಇನ್ನೊಬ್ಬನೆಡೆಗೆ ಎಡತಾಕುವುದೂ ತಪ್ಪುತ್ತದೆ. ಇದರಿಂದ ತಜ್ಞ ವೈದ್ಯರ ಮೇಲಿನ ರೋಗಿಗಳ ಒತ್ತಡವೂ ಕಡಿಮೆಯಾಗುತ್ತದೆ. 

ಯಾವೆಲ್ಲಾ ದೇಶಗಳಲ್ಲಿ ಪರಿಣಾಮಕಾರಿ ಕುಟುಂಬ ವೈದ್ಯ ಪದ್ಧತಿ ಜಾರಿಯಲ್ಲಿದೆಯೋ ಆ ದೇಶಗಳ ಆರೋಗ್ಯ ಸೂಚ್ಯಂಕಗಳು ಉನ್ನತ ಶ್ರೇಣಿಯಲ್ಲಿವೆ. ಯುಕೆಯ NHS(National Health Service) ನಿಯಮಾವಳಿ ಪ್ರಕಾರ ಅನಿವಾರ್ಯ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ರೋಗಿ ಕುಟುಂಬವು ವೈದ್ಯನ ಶಿಫಾರಸಿಲ್ಲದೆ ತಜ್ಞ ವೈದ್ಯನನ್ನು ಭೇಟಿಯಾಗುವ ಹಾಗಿಲ್ಲ. ಅಷ್ಟರಮಟ್ಟಿಗೆ ಕುಟುಂಬ ವೈದ್ಯ ಪದ್ಧತಿ ಅಲ್ಲಿ ಮನ್ನಣೆ ಪಡೆದಿದೆ. ಹೆಚ್ಚೇಕೆ ಥಾಯ್‌ಲ್ಯಾಂಡ್‌ನ‌ಲ್ಲಿ ವೈದ್ಯರ ಅನುಪಾತ ಭಾರತಕ್ಕಿಂತ ಕಮ್ಮಿಯಿದ್ದರೂ ಕುಟುಂಬ ವೈದ್ಯ ಪದ್ಧತಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮವಾಗಿ ಅದು ಆರೋಗ್ಯ ಸೂಚ್ಯಂಕಗಳಲ್ಲಿ ಭಾರತಕ್ಕಿಂತ ಮೇಲಿದೆ.  

ಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದರೂ ಭಾರತದಲ್ಲಿ ಕುಟುಂಬ ವೈದ್ಯ ಪದ್ಧತಿ ಅವಗಣನೆಗೆ ಒಳಗಾಗಲು ಕಾರಣಗಳು ಹಲವು.

1.ಬಂಡವಾಳಶಾಹಿ ಪರ ನಿಲುವು 
ವೈದ್ಯಕೀಯ ಶಿಕ್ಷಣ ಇಂದು ಕೇವಲ ಶಿಕ್ಷಣವಾಗಿ ಉಳಿದಿಲ್ಲ. ಅದು ಬಹುದೊಡ್ಡ ಮಾರಾಟದ ಸರಕು ಎಂದು ಜನಸಾಮಾನ್ಯನಿಗೂ ತಿಳಿದ ವಿಷಯ. ಒಬ್ಬ ತಜ್ಞ ವೈದ್ಯನಾಗಿ ಅರ್ಹತೆ ಗಳಿಸಲು ಬೇಕಾದ ಸ್ನಾತಕೋತ್ತರ ಸೀಟು ಇಂದು ಬಹುಕೋಟಿ ರೂಪಾಯಿಗಳ ದಂಧೆ. ಇದರಲ್ಲಿ ಬರುವ ಭರಪೂರ ಕೋಟಿ ಲಾಭ, ಕುಟುಂಬ ವೈದ್ಯ ಪದ್ಧತಿಯಲ್ಲಿ ಕನಸಿನಲ್ಲೂ ಊಹಿಸಲು ಅಸಾಧ್ಯ. ಸಹಜವಾಗಿಯೇ ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಸರಕಾರಗಳ ನಿಲುವುಗಳು ತಜ್ಞ ವೈದ್ಯರನ್ನು ತಯಾರಿಸುವ ಪರವಾಗಿಯೇ ಇರುವುದರಿಂದ ಕುಟುಂಬ ವೈದ್ಯ ಪದ್ಧತಿ ಅವಗಣನೆಗೆ ಒಳಗಾಗಿರುವುದು ಸ್ವಯಂ ವೇದ್ಯ. 

2.ಸಾಮಾಜಿಕ ಕಾರಣಗಳು
ಸದ್ಯದ ಬದಲಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದರೂ ಕುಟುಂಬ ವೈದ್ಯರನ್ನು ಸಮಾಜ ಸರಿಯಾಗಿ ನಡೆಸಿಕೊಂಡಿಲ್ಲ. ಹೆಚ್ಚಿನ ಕಡೆಗಳಲ್ಲಿ ಕುಟುಂಬ ವೈದ್ಯರು ಸಮಾಜದ ತೀರಾ ಅವಗಣನೆಗೆ ಒಳಗಾಗಿದ್ದಾರೆ. General Practitioner ಎಂದರೆ ಏನೋ ಅಸಡ್ಡೆ ಹಾಗೂ ತಾತ್ಸಾರದಿಂದ ನೋಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸದ್ಯ ತಜ್ಞ ವೈದ್ಯರಿಗೆ ಸಲ್ಲುತ್ತಿರುವ ರಾಜ ಮರ್ಯಾದೆ, ಸಾಮಾಜಿಕ ಮನ್ನಣೆಗಳು ಕುಟುಂಬ ವೈದ್ಯರಿಗೆ ಸಿಗುತ್ತಿಲ್ಲ. ಇದರಿಂದ ಕುಟುಂಬ ವೈದ್ಯರು ತಮ್ಮ ವೃತ್ತಿ ಘನತೆ ಹಾಗೂ ಆತ್ಮ ಗೌರವವನ್ನು ಕಾಪಾಡಿಕೊಳ್ಳುವುದು ಸವಾಲಾಗಿ ಕೀಳರಿಮೆಗೂ ತುತ್ತಾಗುತ್ತಿದ್ದಾರೆ.  ಬಹುಮುಖ್ಯವಾಗಿ ಆರ್ಥಿಕವಾಗಿಯೂ ಒಂದು ಪೂರ್ಣಕಾಲಿಕ ವೃತ್ತಿಯಾಗಿ ಕುಟುಂಬ ವೈದ್ಯನಾಗಿ ಬದುಕುವುದು ಇಂದಿನ ಕಾಲಘಟ್ಟದಲ್ಲಿ ಏನೇನೂ ಆಕರ್ಷಕವಾಗಿ ಉಳಿದಿಲ್ಲ. ಸಮಾಜವೂ ಇದಕ್ಕೆ ಸಹಕರಿಸುತ್ತಿಲ್ಲ. ಒಬ್ಬ ತಜ್ಞ ವೈದ್ಯನಲ್ಲಿಗೆ ಹೋದರೆ ಸಾವಿರಾರು ರೂಪಾಯಿಗಳನ್ನು ವ್ಯಯಿಸುವ ಜನ, ಕುಟುಂಬ ವೈದ್ಯರಿಗೆ ನೂರಿನ್ನೂರು ನೀಡಲೂ ಹಿಂದೇಟು ಹಾಕುತ್ತಾರೆ. ಇಲ್ಲೂ ಚೌಕಾಸಿ ಬೇರೆ. ಉಚಿತವಾಗಿ ಪರೀಕ್ಷೆ ಮಾಡಿಸಿ, ಸಲಹೆ ಪಡೆದು ಉಡಾಫೆಯಿಂದ ಹಾಗೇ ಎದ್ದು ಹೋಗುವ ಮಹಾನುಭಾವರೂ, ಸಾಲ ಮಾಡಿ ಹೋಗುವವರೂ ಇದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳೂ ಸಾಲದು ಎಂಬಂತೆ ಕುಟುಂಬ ವೈದ್ಯರು ನಕಲಿ ವೈದ್ಯರಿಂದಲೂ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಸರಕಾರಗಳ ಹಾಗೂ ವೈದ್ಯಕೀಯ ಕೌನ್ಸಿಲ್‌ಗ‌ಳ ಕಠಿಣ ನೀತಿ ನಿಯಮಾವಳಿಗಳೂ ಕುಟುಂಬ ವೈದ್ಯರನ್ನು ಅಕ್ಷರಶಃ ಹೈರಾಣಾಗಿಸಿವೆ. ನಕಲಿ ವೈದ್ಯರಂತೂ ಯಾವ ನಿಯಮಗಳ ಹಂಗಿಲ್ಲದೇ ರಾಜಾರೋಷವಾಗಿ ವಿಜೃಂಭಿಸುತ್ತಿದ್ದಾರೆ. 

ಇವೆಲ್ಲಾ ಕಾರಣಗಳು ಯುವ ವೈದ್ಯ ಪದವೀಧರರನ್ನು ಕುಟುಂಬ ವೈದ್ಯ ವೃತ್ತಿಯಿಂದ ವಿಮುಖರನ್ನಾಗಿಸಿವೆ. ಹೊಸಬರಾರೂ ಈ ವೃತ್ತಿಗೆ ಸೇರ್ಪಡೆಯಾಗುತ್ತಿಲ್ಲ. ಇದರಿಂದಾಗಿ ಭಾರತದ ಕುಟುಂಬ ವೈದ್ಯ ಪದ್ಧತಿ ನಿಧಾನವಾಗಿ ಅವಸಾನದ ಅಂಚಿಗೆ ಸರಿಯುತ್ತಿದೆ. ಇದೆಲ್ಲದರ ನೇರ ಪರಿಣಾಮ ಸಮಾಜದ ಮೇಲೆ ಆಗುತ್ತಿರುವುದು ಮಾತ್ರ ಕಣ್ಣಿಗೆ ರಾಚುತ್ತಿದೆ. ಮೂಲಭೂತ ವೈದ್ಯ ಸೇವೆಯ ಕೊರತೆಯಿಂದಾಗಿ ಜನ ಎಲ್ಲದಕ್ಕೂ ದೊಡ್ಡಾಸ್ಪತ್ರೆ/ತಜ್ಞ ವೈದ್ಯರಲ್ಲಿಗೆ ಓಡುವಂತಾಗಿದೆ. ಇದರಿಂದಾಗಿ ಚಿಕಿತ್ಸಾ ವೆಚ್ಚಗಳಲ್ಲಿ ಗಣನೀಯ ಹೆಚ್ಚಳ, ತಜ್ಞ ವೈದ್ಯರಿಗೆ ರೋಗಿಗಳ ವಿಪರೀತ ಒತ್ತಡ ಸೃಷ್ಟಿಯಾಗಿದೆ. 

ಇದರಿಂದ ವೈದ್ಯರ ಮೇಲೆ ಜನರ ಅಸಹನೆ ಕೂಡ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಹಣವಂತರೇನೋ ನಿಭಾಯಿಸುತ್ತಿದ್ದಾರೆ ಆದರೆ ಬಡಜನತೆ ಅತ್ತ ತಜ್ಞ ವೈದ್ಯರನ್ನು ಭರಿಸಲಾಗದೆ, ಇತ್ತ ಕುಟುಂಬ ವೈದ್ಯರೂ ದೊರೆಯದೆ, ನಕಲಿ ವೈದ್ಯರಿಗೆ ಶರಣಾಗಿ ಹಣ ಆರೋಗ್ಯ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲ ವಿಷಯ ಸರಕಾರ ಹಾಗೂ ನೀತಿ ರೂಪಿಸುವವರಿಗೆ ತಿಳಿದಿಲ್ಲವೆಂದಲ್ಲ, ಎಲ್ಲ ತಿಳಿದೂ ಜಾಣ ಕಿವುಡರಾಗಿದ್ದಾರೆ, ಜಾಣ ಕುರುಡರಾಗಿದ್ದಾರೆ ಅಷ್ಟೆ. ಸ್ಥಾಪಿತ ಹಿತಾಸಕ್ತಿಗಳು ಎಲ್ಲವನ್ನೂ ನಿಯಂತ್ರಿಸುತ್ತಿವೆ. ಕಾರ್ಪೊರೇಟ್‌ ಸಂಸ್ಕೃತಿ ವಿಜೃಂಭಿಸುತ್ತಿದೆ. ಕುಟುಂಬ ವೈದ್ಯರ ಗತವೈಭವವನ್ನು ಮತ್ತೆ ಸ್ಥಾಪಿಸಬೇಕಾಗಿರುವುದು ಇಂದಿನ ಅತೀ ಜರೂರತ್ತು. ಮುಖ್ಯವಾಗಿ ಯುವ ವೈದ್ಯ ಪದವೀಧರರು ಕುಟುಂಬ ವೈದ್ಯ ಪದ್ಧತಿಯತ್ತ ಆಕರ್ಷಿತವಾಗಲು Family Medicineಗೆ ಒಂದು ಪೂರ್ಣಪ್ರಮಾಣದ ಕ್ಲಿನಿಕಲ್‌ ಸ್ನಾತ್ತಕೋತ್ತರ ಪದವಿಯ ಮನ್ನಣೆ ದೊರಕುವಂತಾಗಬೇಕು. (ಇದು ಈಗಾಗಲೇ ಇದೆಯಾದರೂ ಇನ್ನೂ ಶೈಶವಾವಸ್ಥೆಯಲ್ಲಿದೆ).

ಕುಟುಂಬ ವೈದ್ಯ ಕೇಂದ್ರೀಕೃತ ಕ್ಲಿನಿಕ್‌ಗಳ ಸ್ಥಾಪನೆಗೆ ಈಗಿರುವ ಜಟಿಲ ನಿಯಮಗಳನ್ನು ಸರಳೀಕೃತಗೊಳಿಸಿ ಇನ್ನಷ್ಟು ವೈದ್ಯ ಸ್ನೇಹಿಯಾಗಿಸಬೇಕು. ತಜ್ಞ ವೈದ್ಯನಾದರೆ ಮಾತ್ರ ಯಶಸ್ವಿ ಜೀವನ ಹಾಗೂ ಜನ ಸೇವೆ ಸಾಧ್ಯ ಎಂಬ ಮನಸ್ಥಿತಿಯ ಗುಂಗಿನಿಂದ ವೈದ್ಯ ಪದವೀಧರರೂ ಹೊರಬರಬೇಕು.  ಈ ಕಾಲದಲ್ಲಿ ಬಿಡಿಗಾಸಿಗೆ ವೈದ್ಯ ವೃತ್ತಿ ನಡೆಸುವುದು ಅಸಾಧ್ಯವೆಂಬುದನ್ನು ಸಾರ್ವಜನಿಕರೂ ಮನಗಂಡು ಕುಟುಂಬ ವೈದ್ಯರನ್ನು ಪ್ರೋತ್ಸಾಹಿಸಬೇಕು. ರಾತ್ರಿ ಮೂಗು ಸುರಿಯಲಾರಂಭಿಸಿದರೆ ಬೆಳಿಗ್ಗೆ ತಜ್ಞ ವೈದ್ಯರಲ್ಲಿಗೆ ಓಡುವ ಮನಸ್ಥಿತಿ ಕೊನೆಯಾಗಬೇಕು. 

ಕುಟುಂಬ ವೈದ್ಯ ವೃತ್ತಿಯನ್ನು ಆಕರ್ಷಕವಾಗಿಸಲು ವೃತ್ತಿ ತೆರಿಗೆ ವಿನಾಯಿತಿ, ರಿಯಾಯಿತಿ ದರದಲ್ಲಿ ನಿವೇಶನ ಒದಗಿಸುವುದು ಮುಂತಾದ ಕ್ರಮಗಳನ್ನು ಸರಕಾರವೂ ಕೈಗೊಂಡಲ್ಲಿ, ಕುಟುಂಬ ವೈದ್ಯರೂ ಗೌರವಯುತ ಅರ್ಥಪೂರ್ಣ ಜೀವನ ನಡೆಸಲು ಸಾಧ್ಯವಾದೀತು. ಒಟ್ಟಾರೆಯಾಗಿ “ನಾನೊಬ್ಬ ಕುಟುಂಬ ವೈದ್ಯ’ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳುವಂತಾಗಬೇಕು. 

ಡಾ|ಗಣೇಶ್‌ ಪ್ರಸಾದ್‌ ವಿ. 

Advertisement

Udayavani is now on Telegram. Click here to join our channel and stay updated with the latest news.

Next