ನವದೆಹಲಿ: ಚೀನಾ ಗಡಿ ತಂಟೆ ಬಳಿಕ ಆ ದೇಶದ ಆ್ಯಪ್‌ಗಳ ಬಳಕೆ ನಿಷೇಧಿಸಿ ಮೋದಿ ಸರ್ಕಾರ ಡಿಜಿಟಲ್ ದಾಳಿ ನಡೆಸಿತ್ತು. ಇದೀಗ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರಿಡಾರ್ (ಎನ್‌ಎಚ್‌ಎಸ್‌ಆರ್‌ಎಲ್) ಕೈಗೆತ್ತಿಕೊಂಡಿರುವ ಬುಲೆಟ್ ಟ್ರೈನ್ ಯೋಜನೆಯಲ್ಲಿ ಕೂಡ ಚೀನಾದ ಯಂತ್ರೋಪಕರಣಗಳನ್ನು ಬದಿಗಿರಿಸಿ ಸ್ವದೇಶಿ ಸಂಸ್ಥೆಗಳು ಸಿದ್ಧಪಡಿಸಲಿರುವ ಅತ್ಯುನ್ನತ ತಾಂತ್ರಿಕತೆಯ ಉಪಕರಣಗಳ ಬಳಕೆಗೆ ಆದ್ಯತೆ ನೀಡಲು ತೀರ್ಮಾನಿಸಿದೆ. ಈ ಮೂಲಕ ಪ್ರಧಾನಿಯವರ ಆತ್ಮನಿರ್ಭರ ಭಾರತ ನಿಲುವು ಅನುಸರಿಸಲು ಎನ್‌ಎಚ್‌ಎಸ್‌ಆರ್‌ಎಲ್ ಮುಂದಾಗಿದೆ.
ವಯಡಕ್ಟ್ ನಿರ್ಮಾಣಕ್ಕೆ ಸದ್ಯ ಚೀನಾದ ಯಂತ್ರಗಳನ್ನು ಬಳಸಲಾಗುತ್ತದೆ. ಟ್ರಾನ್ಸ್‌ಪೊರ್ಟರ್, ಗಾಂಟ್ರಿ ಮತ್ತು ಫುಲ್ ಸ್ಪಾಮ್ ಲಾಂಚರ್ ಮಷಿನ್‌ಗಳನ್ನು ಇಂಥ ಬೃಹತ್ ಯೋಜನೆಗಳಲ್ಲಿ ಬಳಸಲಾಗುತ್ತದೆ. ಚೀನಾದಲ್ಲಿ ಸಿದ್ಧಗೊಂಡ ಗರ್ಡರ್ ಕೂರಿಸುವ ಯಂತ್ರ ಭಾರತದಲ್ಲಿ ಬಳಕೆ ಮಾಡುವುದಕ್ಕಿಂತ ಹೆಚ್ಚು ವೇಗ ಮತ್ತು ಅತ್ಯುತ್ತಮವಾಗಿದೆ. ದೇಶೀಯವಾಗಿ ಸಿದ್ಧಪಡಿಸಿದ ಯಂತ್ರೋಪಕರಣಗಳಲ್ಲಿ ಒಂದೂವರೆ ಗರ್ಡರ್‌ಗಳನ್ನು ಕೂಡಿಸಲು ಸಾಧ್ಯವಿದ್ದರೆ, ಚೀನಾ ಯಂತ್ರಗಳಲ್ಲಿ ದಿನಕ್ಕೆ 2ನ್ನು ಪಿಲ್ಲರ್‌ಗಳ ನಡುವೆ ಜೋಡಿಸಲು ಸಾಧ್ಯವಾಗುತ್ತದೆ.
ಪ್ರತಿ ಯಂತ್ರಕ್ಕೆ 70-80 ಕೋಟಿ ರೂ. ಆಗುತ್ತದೆ. ಉದ್ದೇಶಿತ ಯೋಜನೆಗೆ ಅಂಥ 30 ಯಂತ್ರಗಳ ಅಗತ್ಯವಿದೆ ಎಂದು ರೈಲ್ ಕಾರಿಡಾರ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖಾರೆ ಹೇಳಿದ್ದಾರೆ. “237 ಕಿಮೀ ದೂರದ ಯೋಜನೆಯನ್ನು 4 ವರ್ಷಗಳಲ್ಲಿ ಮುಕ್ತಾಯಗೊಳಿಸಬೇಕಿದ್ದರೆ ಅಂಥ ಯಂತ್ರಗಳ ಬಳಕೆ ಮಾಡಿಕೊಳ್ಳಲೇಬೇಕಾಗಿದೆ. ಹೀಗಾಗಿ, ಎಲ್ ಆ್ಯಂಡ್ ಟಿ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ದೇಶದಲ್ಲಿಯೇ ಚೀನಾ ಯಂತ್ರಗಳ ಸಾಮರ್ಥ್ಯಕ್ಕೆ ಸಮನಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ಸಲಹೆ ನೀಡಿದ್ದೇವೆ ಎಂದಿದ್ದಾರೆ.
ಜತೆಗೆ ಅಹಮದಾಬಾದ್‌ನ ಜವಳಿ ಸಂಶೋಧನಾ ಸಂಸ್ಥೆಗೆ ಜಪಾನ್‌ನ ಶಿಂಕಾನ್ಸೆನ್ ರೈಲು ವ್ಯವಸ್ಥೆಯಲ್ಲಿರುವಂತೆ ಬೆಂಕಿ ನಿರೋಧಕ ಪರದೆಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿ ಸಲು ಸೂಚಿಸಲಾಗಿದೆ. ಶಿಂಕಾನ್ಸೆನ್ ರೈಲು ಸಂಚಾರಕ್ಕೆ ಬಳಸುವ ಬಲ್ಲಾಸ್ಟ್ (ನಿಲುಭಾರ) ಮಾದರಿ ಅಭಿವೃದ್ಧಿಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೆ ಮನವಿ ಮಾಡಿಕೊಂಡಿದೆ ಎನ್‌ಎಚ್‌ಎಸ್‌ಆರ್‌ಎಲ್.