ಬೆಂಗಳೂರು: ಟಾಟಾ ಏಸ್ ವಾಹನದಲ್ಲಿ ಬಂದ ಕಳ್ಳರು ಹರಳೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ನುಗ್ಗಿ 3.13 ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರ ಕದ್ದೊಯ್ದಿರುವ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಸದ್ಯ ಆರೋಪಿಗಳು ಕದ್ದೊಯ್ದಿದ್ದ ಎಟಿಎಂ ಯಂತ್ರ ಪತ್ತೆಯಾಗಿದೆ.
ಡಿ.10ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಟಾಟಾ ಏಸ್ ವಾಹನದಲ್ಲಿ ಬಂದ ನಾಲ್ಕು ಮಂದಿ ಕಳ್ಳರು, ಹರಳೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಬಳಿಕ ಕೊಡಲಿಗಳಿಂದ ಎಟಿಎಂ ಕೇಂದ್ರದ ಸುತ್ತ ಹೊಡೆದು, ವೈಯರ್ ಗಳನ್ನು ಕತ್ತರಿಸಿ ಯಂತ್ರ ಕಳವು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಸೆಕ್ಯೂರಿಟಿ ಗಾರ್ಡ್ ಮಲಗಿದ್ದಾಗ ಘಟನೆ: ಎಟಿಎಂ ಕೇಂದ್ರ ಇರುವ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಭದ್ರತಾ ಸಿಬ್ಬಂದಿ ಕೆಳ ಮಹಡಿಯಲ್ಲಿರುವ ಕೊಠಡಿಗೆ ಹೋಗಿ ಮಲಗಿದ್ದರು. ಅದೇ ವೇಳೆ ಆರೋಪಿಗಳು ಕೃತ್ಯ ಎಸಗಿದ್ದಾರೆ. ಮರು ದಿನಗಳ ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್ ಎದ್ದು ಬಂದಾಗ ಎಟಿಎಂ ಯಂತ್ರ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಈ ಮಾಹಿತಿ ಪಡೆದ ಬ್ಯಾಂಕ್‌ನ ಮ್ಯಾನೇಜರ್ ಸ್ಥಳ್ಕಕೆ ಭೇಟಿ ನೀಡಿ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳರು ಎಟಿಎಂ ಯಂತ್ರ ಹೊಡೆ ಯುತ್ತಿರುವ ಶಬ್ದ ಸೆಕ್ಯೂರಿಟಿ ಗಾರ್ಡ್‌ಗೆ ಕೇಳಿದ್ದು, ಆದರೆ, ಬಿಬಿಎಂಪಿ ಕಾಮಗಾರಿ ನಡೆಯುತ್ತಿದ್ದರಿಂದ ಇದನ್ನು ನಿರ್ಲಕ್ಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್, ಎಟಿಎಂ ಯಂತ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದರು.