ವಾಡಿ: ಪಟ್ಟಣ ಸಮೀಪದ ಕುಂಬಾರಹಳ್ಳಿ ಗ್ರಾಮದ ಉಪ ತಹಶೀಲ್ದಾರ ಕಚೇರಿ ಬಳಿಯ ಇಂಡಿಯಾ-1 ಎಟಿಎಂ, ಕಳ್ಳತನ ಮಾಡಿ 15 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಒಟ್ಟು ಮೂವರು ಆರೋಪಿಗಳಲ್ಲಿ ಇಬ್ಬರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ ಬೆನ್ನಲ್ಲೇ ಕಣ್ತಪ್ಪಿಸಿಕೊಂಡು ವಿದೇಶಕ್ಕೆ ಹಾರಿದ್ದ ಮತ್ತೂಬ್ಬ ಆರೋಪಿಯನ್ನು ಶನಿವಾರ ಬಂಧಿಸುವಲ್ಲಿ ವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದ ಶಿವುಕುಮಾರ ಚಂದ್ರಪ್ಪ ಬಂಧಿತ ಮೂರನೇ ಆರೋಪಿಯಾಗಿದ್ದಾನೆ. ಎಟಿಎಂನಿಂದ ಹಣ ದೋಚಿದ ಬಳಿಕ ಆರೋಪಿ ಶಿವುಕುಮಾರ ಉದ್ಯೋಗ ಅರಸಿ ದುಬೈ ಮೂಲದ ಶಾರ್ಜಾ ನಗರಕ್ಕೆ ಹೋಗಿದ್ದ. ವಿದೇಶಕ್ಕೆ ಹೋದ ಆರೋಪಿಯನ್ನು ಬಂಧಿಸುವುದು ಕಷ್ಟಸಾಧ್ಯ ಎಂಬಂತಾಗಿತ್ತು. ಆದರೂ ಛಲಬಿಡದೇ ಪ್ರಯತ್ನ ಮುಂದುವರಿಸಿದೆವು.
ವಿದೇಶಕ್ಕೆ ಕಳುಹಿಸಿದ್ದ ಯುನ್ಯೂಸ್ ಲೈಫ್ ಎಂಬ ಸಂಸ್ಥೆಯನ್ನು ಸಂಪರ್ಕಿಸಿ, ಆರೋಪಿಯನ್ನು ಭಾರತಕ್ಕೆ ಕರೆ ತರಲಾಯಿತು. ಶನಿವಾರ ಸಂಜೆ ಹೈದ್ರಾಬಾದ ವಿಮಾನದಿಂದ ಬಂದಿಳಿದ ತಕ್ಷಣ ಆತನನ್ನು ಬಂಧಿಸಲಾಯಿತು. ಬಂಧಿ ತನಿಂದ 40 ಸಾವಿರ ರೂ. ನಗದು ಹಾಗೂ ಎಟಿಎಂ ಯಂತ್ರ ಕಳ್ಳತನಕ್ಕೆ ಬಳಸಲಾದ ಸಲಕರಣೆಗಳು, ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಸಿಪಿಐ ಶಂಕರಗೌಡ ಪಾಟೀಲ ತಿಳಿಸಿದ್ದಾರೆ. ಪಿಎಸ್‌ಐ ವಿಜಯಕುಮಾರ ಭಾವಗಿ, ಪೇದೆಗಳಾದ ದತ್ತು ಜಾನೆ, ಕೊಟ್ರೇಶ, ಅಶೋಕ ತನಿಖಾ ತಂಡದಲ್ಲಿದ್ದರು.
ಈ ಹಿಂದೆ ಇದೇ ಚಿಂಚೋಳಿ ತಾಲೂಕಿನ ಚಿಂತಕುಂಟಾದ ಜಗದೇವಪ್ಪ ಬುಗ್ಗಪ್ಪ ಬೋಯಿನ್ ಹಾಗೂ ಯಾದಗಿರಿ ತಾಲೂಕಿನ ಚಿಂತಕುಂಟಾ ಗ್ರಾಮದ ಜಗನ್ನಾಥ ಶಾಮರಾವ ಕೊಡದೂರ ಎನ್ನುವ ಆರೋಪಿಗಳನ್ನು ಬಂ ಸಿ 10.20 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ಆರೋಪಿ ಶಿವುಕುಮಾರ ಚಂದ್ರಪ್ಪ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದ. ಪ್ರಕರಣದ ಎಲ್ಲ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ಜೈಲು ಸೇರಿದ್ದಾರೆ.