Advertisement

ಎಟಿಎಂ ಹಲ್ಲೆಕೋರ ಸೆರೆ, 3 ವರ್ಷದ ನಂತರ ಆರೋಪಿ ಬಂಧನ

03:45 AM Feb 05, 2017 | Harsha Rao |

– 3 ವರ್ಷದ ನಂತರ ಆರೋಪಿ ಬಂಧಿಸಿದ ಆಂಧ್ರ ಪೊಲೀಸರು
-„ ಮದನಪಲ್ಲಿಯಲ್ಲಿ ಬಂಧನ
-„ ಐದು ಕೊಲೆ ಮಾಡಿದ್ದ ರೆಡ್ಡಿ

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿ ದೇಶವ್ಯಾಪಿ ಚರ್ಚೆಗೊಳಗಾಗಿದ್ದ ಕಾರ್ಪೋರೇಷನ್‌ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಉದಯ್‌ ಮೇಲೆ ಎಟಿಎಂನಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿ ಮೂರು ವರ್ಷಗಳ ನಂತರ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಸೆರೆ ಸಿಕ್ಕಿದ್ದಾನೆ.

ಚಿತ್ತೂರು ಜಿಲ್ಲೆ ತುಂಬಲಪಲ್ಲಿಯ ಮುದ್ದಲಾಪುರಂ ಗ್ರಾಮದ ಜೆ.ಮಧುಕರ್‌ ರೆಡ್ಡಿ (35) ಬಂಧಿತ ಆರೋಪಿಯಾಗಿದ್ದು, ಜ್ಯೋತಿ ಉದಯ್‌ ಮೇಲಿನ ಹಲ್ಲೆ ಪ್ರಕರಣದ ನಂತರವೂ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ಎಂಬುದು ಪತ್ತೆಯಾಗಿದೆ.

ಆರೋಪಿ ಮೂಲತಃ ಕ್ರಿಮಿನಲ್‌ ಹಿನ್ನೆಲೆಯುಳ್ಳವನಾಗಿದ್ದು ಕಚ್ಚಾ ಬಾಂಬ್‌ ಮೂಲಕ ವ್ಯಕ್ತಿ, ವೃದ್ಧೆ ಹಾಗೂ ಯುವಕ-ಯುವತಿ ಸೇರಿ ಐವರ ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೊಲೆ ಪ್ರಕರಣವೊಂದರಲ್ಲಿ ಕಡಪ ಜೈಲಿನಿಂದ ತಪ್ಪಿಸಿಕೊಂಡು ಚಿತ್ತೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದು ಮತ್ತೆ ಅವರಿಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಚಿತ್ತೂರು ಪೊಲೀಸ್‌ ವರಿಷ್ಠಾಧಿಕಾರಿ ಜಿ.ಶ್ರೀನಿವಾಸ
ಘಟ್ಟಮನೇನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಿಯು ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೂ ಒಳಗಾಗಿದ್ದ ಎಂದು ಮಾಹಿತಿ ನೀಡಿರುವ ಅವರು, ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಉದಯ್‌ ಮೇಲೆ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

Advertisement

ಆರೋಪಿಯನ್ನು ಮದನಪಲ್ಲಿ ಪೊಲೀಸರು ಫೆಬ್ರವರಿ 2 ರಂದೇ ಬಂಧಿಸಿದ್ದು, ಅಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?: ಮಿಷನ್‌ ರಸ್ತೆ ಬಳಿ ಇರುವ ಕಾರ್ಪೋರೇಷನ್‌ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರಾಗಿದ್ದ ಜ್ಯೋತಿ ಉದಯ್‌, 2013ರ ನವೆಂಬರ್‌ 19 ರಂದು ಬೆಂಗಳೂರಿನ ಹೃದಯಭಾಗಲ್ಲಿರುವ ಕಾರ್ಪೋರೇಷನ್‌ ವೃತ್ತದಲ್ಲಿರುವ ಎಟಿಂನಲ್ಲಿ ಬೆಳಗ್ಗೆ 7.09ರ ಸುಮಾರಿಗೆ ಹಣ ಪಡೆಯಲು ಹೋಗಿದ್ದರು.

ಅವರನ್ನು ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿ ಏಕಾಏಕಿ ಎಟಿಎಂ ಕೇಂದ್ರಕ್ಕೆ ನುಗ್ಗಿ ಬಾಗಿಲು ಎಳೆದು ಹಣ ಡ್ರಾ
ಮಾಡಿಕೊಡುವಂತೆ ಬಂದೂಕು ಹಾಗೂ ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿದ್ದ. 

ಖತರ್‌ನಾಕ್‌ ರೆಡ್ಡಿ!
-2005ರಲ್ಲಿ ತನ್ನದೇ ಗ್ರಾಮದ ಆನಂದ್‌ ರೆಡ್ಡಿ ಎಂಬುವರ ಜತೆ ನೀರಿನ ವಿಚಾರಕ್ಕೆ ಜಗಳ ಮಾಡಿ ಕಚ್ಚಾ ಬಾಂಬ್‌ ಹಾಕಿ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಆರೋಪಿ ಕಡಪಾ ಕೇಂದ್ರ ಕಾರಾಗೃಹದಲ್ಲಿದ್ದ.

– 2011ರಲ್ಲಿ ಹಲ್ಲು ನೋವೆಂದು ಹೇಳಿದ್ದ ಈತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ತಪ್ಪಿಸಿಕೊಂಡಿದ್ದ. ಬಳಿಕ ಚಿತ್ತೂರು ಪೊಲೀಸರಿಗೆ ಸೆರೆ ಸಿಕ್ಕಿ, ಪರಾರಿಯಾಗಿದ್ದ.

-„ 2011 ರಿಂದ 2015 ರವರೆಗೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ವೇಳೆ ಹಣಕ್ಕಾಗಿ ಹೈದ್ರಾಬಾದ್‌ನ ಮಾಲ್‌ವೊಂದರ ಬಳಿ ರಾತ್ರಿ ವೇಳೆ ಯುವಕ-ಯುವತಿಯನ್ನು ಕೊಲೆಗೈದು ಹಣ, ಎಟಿಎಂ ಕಾರ್ಡ್‌ ಕಳವು ಮಾಡಿದ್ದ.

-„ 2013 ನವೆಂಬರ್‌ನಲ್ಲಿ ಮದ್ಯದ ವಿಚಾರವಾಗಿ ಹೈದ್ರಾಬಾದ್‌ನ ಮೆಹಬೂಬ್‌ ನಗರದಲ್ಲಿ ವ್ಯಕ್ತಿಯೊಬ್ಬರ ಜತೆ ಜಗಳವಾಡಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ.

-„ 2013ರಲ್ಲಿ ಧರ್ಮಾವರಂಗೆ ತೆರಳಿದ್ದ ಆರೋಪಿ ಒಂಟಿ ಮನೆಯಲ್ಲಿ ವೃದ್ಧೆ ಹತ್ಯೆ ಮಾಡಿ ಹಣ, ಚಿನ್ನಾಭರಣ ಹಾಗೂ ಎಟಿಎಂ ಕಾರ್ಡ್‌ ಕಳವು ಮಾಡಿಕೊಂಡು ಹೋಗಿದ್ದ. ಧರ್ಮಾವರಂನಿಂದ ಅನಂತಪುರ ಜಿಲ್ಲೆ ಕದಿರಿಗೆ ಹೋಗಿ ಎಟಿಎಂನಲ್ಲಿ 4 ಸಾವಿರ ಡ್ರಾ ಮಾಡಿದ್ದ. ಎಟಿಎಂ ಕಾರ್ಡಲ್ಲಿ ಹಣ ಖಾಲಿಯಾದ ನಂತರ ಕದಿರಿಯ ಕೆಲವೆಡೆ ಕಳವು ಮಾಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next